ರಾಜ್ಯ ವಿಧಾನಸಭೆ ಚುನಾವಣೆಗಾಗಿ ಮೇ 10ರಂದು ಮತದಾನ ಜರುಗಿ, ಮೇ 13ರಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಹಾಗೂ ಎಂಟು ಸಚಿವರು ಮೇ 20ರಂದು ಪ್ರಮಾಣವಚನ ಸ್ವೀಕರಿಸಿದರು. ತದನಂತರದಲ್ಲಿ ಮೇ 27ರಂದು ಮತ್ತೆ 24 ಸಚಿವರು ಪ್ರಮಾಣವಚನ ಸ್ವೀಕರಿಸುವ ಮೂಲಕ ಯಾವುದೇ ಸಚಿವ ಸ್ಥಾನ ಖಾಲಿ ಇಟ್ಟುಕೊಳ್ಳದೆ ಪೂರ್ಣಪ್ರಮಾಣದ ಮಂತ್ರಿಮಂಡಲ ರಚಿಸಲಾಯಿತು. ಈಗ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಚಿವರುಗಳಿಗೆ ಹಂಚಿಕೆ ಮಾಡುವುದರೊಂದಿಗೆ ಜಿಲ್ಲಾ ಮಟ್ಟದಲ್ಲಿ ಆಡಳಿತಕ್ಕೆ ಚುರುಕು ನೀಡಲು ಕ್ರಮ ಕೈಗೊಳ್ಳಲಾಗಿದೆ ಎನ್ನಬಹುದು.
ಈ ಮುಂಚೆ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಗುಜರಾತ್ ಮಾದರಿಯ ಪ್ರಯೋಗವನ್ನು ಅನುಸರಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಅವರ ಸ್ವಂತ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ನೇಮಕ ಮಾಡಲಾಗಿತ್ತು. ಇಂತಹ ಕ್ರಮವು ಅಡಚಣೆ, ಕಿರಿಕಿರಿಗೂ ಕಾರಣವಾಯಿತು ಎಂದು ಅಂದು ಕೆಲ ಸಚಿವರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಉಸ್ತುವಾರಿ ನೀಡಲಾದ ಜಿಲ್ಲೆ, ಸ್ವಂತ ಜಿಲ್ಲೆ, ಸ್ವಂತ ಕ್ಷೇತ್ರ ಹಾಗೂ ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವುದಕ್ಕಾಗಿಯೇ ಸಾಕಷ್ಟು ಸಮಯ, ಶ್ರಮ ವ್ಯಯವಾಗುತ್ತಿದೆ ಎಂದು ಗೋಳು ತೋಡಿಕೊಳ್ಳುತ್ತಿದ್ದರು. ಆದರೀಗ, ಸಿದ್ದರಾಮಯ್ಯ ಸರ್ಕಾರದಲ್ಲಿ ಬಹುತೇಕ ಸಚಿವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡಿರುವುದರಿಂದ ಸ್ವಕ್ಷೇತ್ರ, ಸ್ವಂತ ಜಿಲ್ಲೆಗಳಿಗೆ ಸಾಕಷ್ಟು ಸಮಯ ನೀಡಿ ಆಡಳಿತ ನಡೆಸಲು, ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ನೆರವಾಗಬಹುದಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸುವ ಉದ್ದೇಶದೊಂದಿಗೆ ಅಳೆದುತೂಗಿ ಉಸ್ತುವಾರಿ ಸಚಿವ ನೇಮಕವನ್ನು ಮುಖ್ಯಮಂತ್ರಿಗಳು ಮಾಡಿದಂತಿದೆ. ಏಕೆಂದರೆ, 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಒಂದು ಸ್ಥಾನದಲ್ಲಿ ಮಾತ್ರ. 2024ರಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.
ಈಗ ಮುಂಗಾರು ಪ್ರವೇಶಿಸುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಬಿತ್ತನೆಗೆ ಅಗತ್ಯವಿರುವ ಬೀಜ, ರಸಗೊಬ್ಬರ ಮುಂತಾದವುಗಳು ರೈತರಿಗೆ ಸುಲಭವಾಗಿ, ಯೋಗ್ಯ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಮಹತ್ವದ್ದಾಗಿದೆ. ಮಳೆಗಾಲದಲ್ಲಿ ತಲೆದೋರಬಹುದಾದ ಅತಿವೃಷ್ಟಿ, ನೆರೆ ಹಾವಳಿಯಂತಹ ಪ್ರಕೃತಿ ವಿಕೋಪಗಳನ್ನು ಎದುರಿಸಲು ಜಿಲ್ಲಾಡಳಿತ, ತಾಲೂಕಾಡಗಳಿತಗಳನ್ನು ಸಜ್ಜುಗೊಳಿಸಬೇಕಿದೆ. ಇನ್ನು, ಕೆಲವೆಡೆಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ. ಇನ್ನು ಪ್ರಸ್ತುತ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುವುದು. ಈ ಗ್ಯಾರಂಟಿಗಳ ಅನುಷ್ಠಾನದಲ್ಲಿ ವಿಧಿಸಲಾಗುತ್ತಿರುವ ಷರತ್ತುಗಳ ಬಗೆಗೆ ಸಾಕಷ್ಟು ಗೊಂದಲ, ಅಸಮಾಧಾನ, ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇದನ್ನು ನಿಭಾಯಿಸುವುದರಲ್ಲಿ ಹೆಚ್ಚು ಗಮನ ಅಗತ್ಯ ಎಂಬುದು ನಿಜ. ಆದರೆ ಈ ಕೆಲಸದ ನಡುವೆ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿನ ಆಡಳಿತ, ಅಭಿವೃದ್ಧಿ ಕಾರ್ಯಗಳತ್ತ ಆದ್ಯಗಮನ ನೀಡುವುದನ್ನು ಸಚಿವರು ಮರೆಯದಿರಲಿ.