ನ್ಯೂಸ್

ಲೇಡಿಸ್​ ಪಿಜಿಯಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​; ಪೊಲೀಸ್​ ತನಿಖೆಯಲ್ಲಿ ಬಯಲಾಯ್ತು ಅಸಲಿ ಸತ್ಯ

ಬೆಂಗಳೂರು: ಕೋರಮಂಗಲದ ವಿಆರ್ ಲೇಔಟ್​ನಲ್ಲಿರುವ ಲೇಡಿಸ್​ ಪಿಜಿಯಲ್ಲಿ ಬಿಹಾರ ಮೂಲದ ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿ ಅಭಿಷೇಕ್​ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದು, ತನಿಖೆ ವೇಳೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಮೊದಲಿಗೆ ಕೊಲೆಯಾದ ಯುವತಿ ಹಾಗೂ ಆರೋಪಿ ಪರಿಚಯಸ್ಥರು ಎಂದು ಹೇಳಲಾಗಿತ್ತು. ಆದರೆ, ಇದೀಗ ತಿಳಿದು ಬಂದಿರುವ ಮಾಹಿತಿ ಏನೆಂದರೆ ಯುವತಿಗೆ ಆರೋಪಿಯ ಪರಿಚಯವೇ ಇರಲಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೊಲೆ ಆರೋಪಿ ಅಭಿಷೇಕ್​ ಮಧ್ಯಪ್ರದೇಶದ ಭೋಪಾಲ್​ ನಿವಾಸಿಯಾಗಿದ್ದು, ಮೃತ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಒಂದೇ ಪಿಜಿಯಲ್ಲಿ ಲಿವಿಂಗ್ ಟುಗೆದರ್ ರೀತಿಯಲ್ಲಿ ವಾಸವಾಗಿದ್ದರು. ಆದರೆ, ಕಳೆದ ಕೆಲವು ತಿಂಗಳ ಹಿಂದೆ ಅಭಿಷೇಕ್ ಕೆಲಸ ಬಿಟ್ಟು ಭೋಪಾಲ್‌ಗೆ ಹೋಗಿದ್ದನು. ಜೊತೆಗೆ, ಆಗಾಗ ಬೆಂಗಳೂರಿಗೆ ಬಂದು ಪ್ರೇಯಸಿಯನ್ನು ಭೇಟಿ ಮಾಡಿ ಹೋಗುತ್ತಿದ್ದನು.

ಯಾವುದೇ ಕೆಲಸ ಮಾಡದೇ ನಿರಿದ್ಯೋಗಿಯಾಗಿ ಅಲೆದಾಡುತ್ತಿದ್ದ ಅಭಿಷೇಕ್‌ಗೆ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೊಳ್ಳುವಂತೆ ಪ್ರೇಯಸಿ ಹೇಳಿದ್ದಾಳೆ. ಆದರೆ, ಆತ ಕೆಲಸಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಕೆಲ ದಿನಗಳ ಬಳಿಕ ಈತ ಸುಳ್ಳು ಹೇಳಿರುವ ವಿಚಾರ ಪ್ರೇಯಸಿಗೆ ತಿಳಿದಿದ್ದು, ಆತನಿಂದ ಅಂತರವನ್ನು ಕಾಯ್ದುಕೊಂಡಿದ್ದಾಳೆ. ಇದರಿಂದ ಕುಪಿತಗೊಂಡಿದ್ದ ಆರೋಪಿ ಆಕೆ ವಾಸವಿದ್ದ ಪಿಜಿ ಬಳಿ ಹೋಗಿ ಗಲಾಟೆ ಮಾಡಿದ್ದನಂತೆ.

ತಾನು ವಾಸವಿದ್ದ ಪಿಜಿ ಬಳಿ ಗಲಾಟೆ ಮಾಡಿದ್ದರಿಂದ ಆರೋಪಿಯ ಪ್ರೇಯಸಿ ಕೃತಿ ಕುಮಾರಿ ವಾಸವಿದ್ದ ಕಡೆ ಶಿಫ್ಟ್​ ಆಗಿದ್ದಾಳೆ. ಆರೋಪಿಯ ಪ್ರೇಯಸಿಗೆ ಕೃತಿ ಕುಮಾರಿ ಸಹಾಯ ಮಾಡಿದ್ದಳಂತೆ. ಇದಾದ ಬಳಿಕ ಕಾರೋಪಿ ಹಾಗೂ ಆತನ ಪ್ರೇಯಸಿ ಭೇಟಿಯಾಗಿದ್ದು, ತಾನು ಉಳಿದುಕೊಂಡಿರುವ ಪಿಜಿ ಹಾಗೂ ಸಹಾಯ ಮಾಡಿದ ಯುವತಿ ಕೃತಿ ಬಗ್ಗೆ ಹೇಳಿದ್ದಾಳೆ. ಇದರಿಂದ ಕುಪಿತಗೊಂಡಿದ್ದ ಆರೋಪಿ ಪ್ರೇಯಸಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಅದರಂತೆ ಆರೋಪಿ ಜೂನ್​ 23ರ ರಾತ್ರಿ 11:30ರ ಸುಮಾರಿಗೆ ಪ್ರೇಯಸಿ ವಾಸವಿದ್ದ ಪಿಜಿಗೆ ನುಗ್ಗಿದ್ದು, ಪ್ರೇಯಸಿ ವಾಸವಿದ್ದ ರೂಮಿನ  ಬಾಗಿಲು ಬಡಿದಿದ್ದಾನೆ. ಈ ವೇಳೆ ಪ್ರೇಯಸಿಯ ಬದಲು ಕೃತಿ ಕುಮಾರಿ ಬಾಗಿಲು ತೆರೆದಿದ್ದು, ಯಾರೆಂಬುದನ್ನೂ ನೋಡದೇ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ.  ಕೂಡಲೇ ಯುವತಿ ಕೃತಿ ಕುಮಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆರೋಪಿ ಅಭಿಷೇಕ್​ಗಾಗಿ ಹುಡುಕಾಟ ಮುಂದುವರೆದಿದ್ದು, ಪೊಲೀಸರು ಮೂರು ತಂಡಗಳಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.