ಮೇಜರ್ ಅಮೃತ್ ಪಾಂಡಾ ಹೊಸ ದಾಖಲೆ  
ನ್ಯೂಸ್

ಮೇಜರ್ ಅಮೃತ್ ಪಾಂಡಾ ಹೊಸ ದಾಖಲೆ : ಮೋಟಾರ್ ಸೈಕಲ್ ಮೇಲೆ ನಿಂತು ದೀರ್ಘ ಪ್ರಯಾಣ

‘ಮೋಟಾರ್ ಸೈಕಲ್’ ಅಸನ ಮೇಲೆ ನಿಂತು ಸುದೀರ್ಘ ಪ್ರಯಾಣದ ವಿಭಾಗದಲ್ಲಿ ಮೇಜರ್ ಅಮೃತ್ ಪಾಂಡಾ ಹೊಸ ದಾಖಲೆ ನಿರ್ಮಿಸಿದ್ದಾರೆ.

ಬೆಂಗಳೂರು: ‘ಮೋಟಾರ್ ಸೈಕಲ್’ ಅಸನ ಮೇಲೆ ನಿಂತು ಸುದೀರ್ಘ ಪ್ರಯಾಣದ ವಿಭಾಗದಲ್ಲಿ ಮೇಜರ್ ಅಮೃತ್ ಪಾಂಡಾ ಹೊಸ ದಾಖಲೆ ನಿರ್ಮಿಸಿದ್ದಾರೆ.

154 ಕಿಮೀ ದೂರ ಕ್ರಮಿಸುವ ಮೂಲಕ ಎಎಸ್‌ಸಿ ಟಾರ್ನಾಡೋಸ್ ತಂಡದ ಒಟ್ಟು ವಿಶ್ವ ದಾಖಲೆಗಳ ಸಂಖ್ಯೆಯನ್ನು 36ಕ್ಕೆ ಹೆಚ್ಚಿಸಿದ್ದಾರೆ. ಜತೆಗೆ, ಈವರೆಗೆ ಇದ್ದ ಹಳೆಯ 107 ಕಿಮೀ ದಾಖಲೆಯನ್ನೂ ಅಳಿಸಿಹಾಕಿದ್ದಾರೆ.

ಅವರ ಸಾಧನೆಯು ದೈಹಿಕ,ತಾಂತ್ರಿಕ ಕೌಶಲದ ವಿಜಯದ ಜತೆಗೆ ಭಾರತದ ವೀರ ಯೋಧರಿಗೆ ಸಲ್ಲಿಸಿದ ಗೌರವ, ಭಾರತೀಯ ಸೇನೆಯನ್ನು ಬಿಂಬಿಸುವ ದೇಶಭಕ್ತಿ, ಧೈರ್ಯ, ಶಿಸ್ತು ಮತ್ತು ಸತತ ಪ್ರಯತ್ನದ ಮೌಲ್ಯಗಳ ಪ್ರತಿಬಿಂಬವಾಗಿದೆ.

ಎಎಸ್‌ಸಿ ಟಾರ್ನಾಡೋಸ್ ಪಡೆಯ ಪಯಣವು 1982ರಲ್ಲಿ ಮೇಜರ್ ಸಿ.ಎನ್. ರಾವ್ ಅವರ ನೇತೃತ್ವದಲ್ಲಿ ಕ್ಯಾಪ್ಟನ್ ಜೆ.ಪಿ.ವರ್ಮಾ ಮತ್ತು ಸುಬೇದಾರ್ ಧನ್ ಸಿಂಗ್ ಸಹಕಾರದೊಂದಿಗೆ ಪ್ರಾರಂಭವಾಯಿತು. 1982ರ ಏಷ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ವೈಭವೋಪೇತ ಪ್ರದರ್ಶನವು ಸಾಹಸ, ಕೌಶಲ ಮತ್ತು ಶ್ರೇಷ್ಠತೆಯ ಹೊಸ ಪಯಣಕ್ಕೆ ಮುನ್ನುಡಿ ಬರೆಯಿತು.

ಈ ತಂಡವು ಆರಂಭದಿಂದಲೂ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ ಬಳಸುತ್ತಿದೆ. ಕಠಿಣ ತರಬೇತಿ, ಸೂಕ್ತ ಸಿದ್ಧತೆ, ಸುದೀರ್ಘ ಅಭ್ಯಾಸದಿಂದ ಹಲವು ಸಾಹಸಗಳನ್ನು ಪ್ರದರ್ಶಿಸುತ್ತಿದೆ. ಗಣರಾಜ್ಯೋತ್ಸವ ಪರೇಡ್‌ಗಳು, ಎತ್ತರದ ಪರ್ವತ ಪ್ರದೇಶದ ಸಾಹಸಯಾತ್ರೆಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರದರ್ಶನಗಳನ್ನೂ ಒಳಗೊಂಡಿದೆ.