ನ್ಯೂಸ್

ಸಂಸತ್​ನಿಂದ ಮಹುವಾ ಔಟ್: ನಾಯಿಗಾಗಿ ನಡೆದ ಜಗಳದಿಂದ ಸಂಸದೆ ಸ್ಥಾನವೇ ಹೋಯ್ತು!

ನವದೆಹಲಿ: ಪಾರ್ಲಿಮೆಂಟ್ ವೆಬ್​ಸೈಟ್​ನಲ್ಲಿ ಸಂಸದರಿಗೆ ನೀಡಲಾಗುವ ಖಾತೆಯ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹೀರಾನಂದಾನಿ ಜತೆಗೆ ಟಿಎಂಸಿ ನಾಯಕಿ ಮಹುವಾ ಹಂಚಿಕೊಂಡಿದ್ದರು ಮತ್ತು ಮೂರ್ನಾಲ್ಕು ದೇಶಗಳಿಂದ ಮಹುವಾ ಅವರ ಲೋಕಸಭೆ ಖಾತೆಗೆ ಖಾಸಗಿ ವ್ಯಕ್ತಿಗಳು ಲಾಗ್-ಇನ್ ಆಗಿದ್ದರು ಎಂಬ ವಿಚಾರ ಅವರ ಸಂಸದೆ ಸ್ಥಾನಕ್ಕೆ ಕುತ್ತು ತಂದಿದೆ.

ಈ ಕುರಿತು ಐಟಿ ಇಲಾಖೆಯಿಂದ ನೈತಿಕ ಸಮಿತಿ ವರದಿ ಪಡೆದುಕೊಂಡಿತ್ತು. ಮಹುವಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸ್ಪೀಕರ್ ಓಂ ಬಿರ್ಲಾಗೆ ದೂರು ನೀಡಿದ್ದರು. ಈ ದೂರನ್ನು ನೈತಿಕ ಸಮಿತಿಗೆ ಸ್ಪೀಕರ್ ಶಿಫಾರಸು ಮಾಡಿದ್ದರು. ಬಿಜೆಪಿ ಸಂಸದ ವಿನೋದ್ ಸೊಂಕರ್ ನೇತೃತ್ವದ ನೈತಿಕ ಸಮಿತಿ ದುಬೆ, ಮಹುವಾ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿತ್ತು. ಈ ಬೆಳವಣಿಗೆ ಮಧ್ಯೆ, ದರ್ಶನ್ ಹೀರಾನಂದಾನಿ ಖುದ್ದಾಗಿ ಸಮಿತಿಗೆ ಅಫಿಡವಿಟ್​ವೊಂದನ್ನು ಸಲ್ಲಿಸಿ, ಪ್ರಶ್ನೆ ಕೇಳಲು ಹಣ, ಉಡುಗೊರೆ ನೀಡಿದ್ದು ಮತ್ತು ಲಾಗ್-ಇನ್ ವಿವರ ಮಹುವಾ ಹಂಚಿಕೊಂಡಿದ್ದಾಗಿ ಒಪ್ಪಿಕೊಂಡಿದ್ದರು. ಆದರೆ, ಲಂಚ ಪಡೆಯಲಾಗಿದೆ ಎಂಬ ಆರೋಪ ತಳ್ಳಿಹಾಕಿದ್ದ ಮಹುವಾ, ಲಾಗ್-ಇನ್ ವಿವರ ನೀಡಿದ್ದು ನಿಜ ಎಂಬುದಾಗಿ ಸಮಿತಿಗೆ ತಿಳಿಸಿದ್ದರು. ಸಮಿತಿಯಲ್ಲಿ ಒಟ್ಟು 10 ಸದಸ್ಯರಿದ್ದು, 6 ಮಂದಿ ಮಹುವಾ ಉಚ್ಚಾಟನೆಗೆ ಶಿಫಾರಸು ಮಾಡಿದ್ದ ವರದಿಯನ್ನು ಬೆಂಬಲಿಸಿದ್ದರು.

ನಿರಾಕರಿಸಲಾಗದ ಆರೋಪ

ಉದ್ಯಮಿಯಿಂದ ಲಂಚ ಸ್ವೀಕರಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ಆರೋಪ ನಿರಾಕರಿಸಲಾಗದ್ದು. ಸಂಸತ್ತಿನ ಲಾಗ್-ಇನ್ ವಿವರಗಳು ಹಂಚಿಕೊಂಡು, ಉಡುಗೊರೆ ಪಡೆದಿರುವುದು ಅಕ್ರಮಕ್ಕೆ ಸಮ. ಹಣದ ಜಾಡನ್ನು ಪತ್ತೆಹಚ್ಚಲು ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ನೈತಿಕ ಸಮಿತಿ ಹೇಳಿದೆ.

ಮುಂದೇನು?

ಸಂಸತ್ತಿನ ತೀರ್ವನವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ಯಮಿಯಿಂದ ನಗದು ಅಥವಾ ಉಡುಗೊರೆಗಳನ್ನು ಸ್ವೀಕರಿಸಿದ್ದೇನೆ ಎನ್ನುವುದಕ್ಕೆ ಪೂರಕ ಪುರಾವೆಗಳ ಕೊರತೆಯಿದೆ. ಇದರ ವಿರುದ್ಧ ಹೋರಾಡಲಿದ್ದೇನೆ ಎಂದು ಮಹುವಾ ಪ್ರತಿಪಾದಿಸಿದ್ದಾರೆ. ಲೋಕಸಭೆ ಚುನಾವಣೆಗೆ ಅವರು ಮತ್ತೆ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಬಹುದು. ಬಂಗಾಳದಲ್ಲಿ ಬಿಜೆಪಿ ವಿರುದ್ಧ ಚುನಾವಣಾ ಹೋರಾಟಕ್ಕೆ ಸಿಎಂ ಮಮತಾ ಬ್ಯಾನರ್ಜಿ ಇದನ್ನೇ ಅಸ್ತ್ರವನ್ನಾಗಿ ಬಳಸಬಹುದು.

ನನಗೀಗ 49 ವರ್ಷ, ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ, ಹೊರಗೆ ನಿಮ್ಮ ವಿರುದ್ಧ ಹೋರಾಡಲಿದ್ದೇನೆ. ನೈತಿಕ ಸಮಿತಿಗೆ ನನ್ನನ್ನು ಹೊರಹಾಕುವ ಅಧಿಕಾರವಿಲ್ಲ. ಅದಾನಿ ಸಾಹೇಬರು ನಿಮಗೆ (ಬಿಜೆಪಿಗೆ) ಎಷ್ಟೊಂದು ಮುಖ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದು ನಿಮ್ಮ ಅಂತ್ಯದ ಆರಂಭ

| ಮಹುವಾ ಮೊಯಿತ್ರಾ ಟಿಎಂಸಿಯ ಉಚ್ಚಾಟಿತ ಸಂಸದೆ

ಹೀರಾನಂದಾನಿ ಅಫಿಡವಿಟ್

ಪತ್ರಕರ್ತೆ ಸುಚೇತಾ ದಲಾಲ್ ಸೇರಿ ಮೊಯಿತ್ರಾ ಜತೆ ಹಲವರು ಸಂಪರ್ಕದಲ್ಲಿದ್ದು, ಮೋದಿ-ಅದಾನಿ ವಿರುದ್ಧ ಖಚಿತವಲ್ಲದ ಮಾಹಿತಿ ಒದಗಿಸುತ್ತಿದ್ದರು. ಪದೆ ಪದೇ ತಮ್ಮಿಂದ ಹಲವು ಲಾಭಗಳನ್ನು ಮೊಯಿತ್ರಾ ನಿರೀಕ್ಷಿಸುತ್ತಿದ್ದರು. ನಾನು ಅವೆಲ್ಲವನ್ನೂ ಈಡೇರಿಸುತ್ತಿದ್ದೆ ಎಂದು ಹೀರಾನಂದಾನಿ ಸಮಿತಿ ಅಫಿಡವಿಟ್ ಸಲ್ಲಿಸಿದ್ದರು.ಮಹುವಾಗೆ ದುಬಾರಿ ಐಷಾರಾಮಿ ಉಡುಗೊರೆ, ದೆಹಲಿಯ ಸರ್ಕಾರಿ ಬಂಗಲೆ ನವೀಕರಣ, ಭಾರತ ಸೇರಿ ವಿಶ್ವದ ವಿವಿಧೆಡೆ ಓಡಾಡುವ ಪ್ರಯಾಣ ವೆಚ್ಚ, ಲಾಜಿಸ್ಟಿಕಲ್ ಸಹಾಯ ಸೇರಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿತ್ತು.

ನಾಯಿಗಾಗಿ ಜಗಳ!

ಮಹುವಾ ಮೊಯಿತ್ರಾ ತಮ್ಮ ಮಾಜಿ ಸ್ನೇಹಿತ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೆಹದ್ರಾಯ್ ಜತೆಗೆ ನಾಯಿಗಾಗಿ ಜಗಳವಾಡಿದ್ದು ಸಂಸದ ಸ್ಥಾನ ಕಳೆದುಕೊಳ್ಳುವ ಹಂತಕ್ಕೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನಾಯಿ ಮಾಲಿಕತ್ವಕ್ಕೆ ಇಬ್ಬರ ನಡುವಿನ ಸಂಘರ್ಷ ಕೋರ್ಟ್ ಮೆಟ್ಟಿಲೇರಿತ್ತು. ಮಹುವಾ ತಮ್ಮ ನಾಯಿಯನ್ನು ಕಿತ್ತುಕೊಂಡರು ಎಂದು ಆಕ್ರೋಶಕ್ಕೀಡಾಗಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಜತೆ ಕಾಸಿಗಾಗಿ ಪ್ರಶ್ನೆ ಕುರಿತ ಮಹತ್ವದ ಮಾಹಿರಿಯನ್ನು ವಕೀಲ ಜೈ ಅನಂತ್ ಹಂಚಿಕೊಂಡರು. ನಂತರ ಸಿಬಿಐಗೂ ದೂರು ನೀಡಿದ್ದರು.

ಮಾತಿಗಿಲ್ಲ ಅವಕಾಶ

ಈ ವರದಿ ಬಗ್ಗೆ ಸಂಸದೆ ಮಹುವಾಗೆ ಮಾತನಾಡಲು ಅವಕಾಶ ನೀಡಬೇಕು ಎಂದು ವಿಪಕ್ಷಗಳ ವಿವಿಧ ಸಂಸದರು ಸ್ಪೀಕರ್​ನ್ನು ಒತ್ತಾಯಿಸಿದರು. ಆದರೆ, ಬಿಜೆಪಿ ಸಂಸದರು ಮತ್ತು ಸ್ಪೀಕರ್ ಕೂಡ ಒಪ್ಪಲಿಲ್ಲ. ಹಿಂದೆ 2005ರಲ್ಲಿ ಯುಪಿಎ ಸರ್ಕಾರವಿದ್ದಾಗ 10 ಸಂಸದರನ್ನು (6 ಮಂದಿ ಬಿಜೆಪಿ) ಇದೇ ರೀತಿಯಲ್ಲಿ ಉಚ್ಚಾಟಿಸಿದ್ದಾಗ ಅವರಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ. ಅದೇ ನಿಯಮ ಈಗಲೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಲಾಯಿತು.

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ನಾವು ನಿಯಮಗಳಿಗೆ ಬದ್ಧರಾಗಿರಬೇಕು. ಇದು ಎಲ್ಲಾ ಸಂಸದರಿಗೆ ಒಂದು ಪಾಠ. ಇಡೀ ದೇಶ ನಮ್ಮನ್ನು ಗಮನಿಸುತ್ತಿರುತ್ತದೆ. ಮಹುವಾ ಪ್ರಕರಣದಲ್ಲಿ ಅನೈತಿಕತೆ ಎದ್ದುಕಾಣುತ್ತಿತ್ತು. ಹಾಗಾಗಿಯೇ ಅವರನ್ನು ಲೋಕಸಭೆಯಿಂದ ಹೊರಹಾಕಲಾಗಿದೆ.

| ಅಪರಾಜಿತಾ ಸಾರಂಗಿ ಬಿಜೆಪಿ ಸಂಸದೆ, ನೈತಿಕ ಸಮಿತಿ ಸದಸ್ಯೆ

2005ರ ಪ್ರಕರಣ

2005ರಲ್ಲಿ ಆನ್​ಲೈನ್ ಸುದ್ದಿತಾಣ ಕೋಬ್ರಾಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆ ಮೂಲಕ ಪ್ರಶ್ನೆಗಾಗಿ ಕಾಸು ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ 11 ಸಂಸತ್ ಸದಸ್ಯರು ಹಣ ಸ್ವೀಕರಿಸುತ್ತಿರುವುದನ್ನು ಬಹಿರಂಗವಾಗಿತ್ತು. ಈ ಹಗರಣವು ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಕಪ್ಪುಚುಕ್ಕೆಯಾಗಿತ್ತು. ಮಹುವಾರದ್ದೂ ಹೆಚ್ಚು ಕಡಿಮೆ ಇದೇ ರೀತಿಯ ಪ್ರಕರಣ. ಅಂದು ಆರೋಪಿಗಳಲ್ಲಿ ಬಿಜೆಪಿಯ ಆರು, ಬಿಎಸ್​ಪಿಯ ಮೂವರು, ಆರ್​ಜೆಡಿ ಮತ್ತು ಕಾಂಗ್ರೆಸ್​ನ ಒಬ್ಬರು ಸಂಸದರಿದ್ದರು. 2005ರ ಡಿಸೆಂಬರ್ 24ರಂದು ಮತದಾನದ ಮೂಲಕ ಎಲ್ಲಾ 11 ಸಂಸದರನ್ನು ಲೋಕಸಭೆಯಿಂದ ಉಚ್ಚಾಟಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿತ್ತು. 2007ರಲ್ಲಿ ಸುಪ್ರೀಂಕೋರ್ಟ್ ಕೂಡ ಈ ತೀರ್ಮಾನ ಬೆಂಬಲಿಸಿ ತೀರ್ಪು ನೀಡಿತ್ತು.