ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ಯಾಂಡಲ್ವುಡ್ನ ಕಿಸ್ ಬೆಡಗಿ, ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ ‘ಗುಂಟೂರು ಕಾರಂ’ ಇದೇ ಜ.12ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್ ಆದ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಜತೆಗೆ ಕಲೆಕ್ಷನ್ನಲ್ಲಿಯೂ ಉತ್ತಮ ಆರಂಭ ದೊರಕಿತು. ಇದೀಗ ಮೊದಲ ವಾರಾಂತ್ಯಕ್ಕೆ ತಲುಪಿರುವ ಚಿತ್ರ ಗಳಿಸಿದ ಒಟ್ಟು ಮೊತ್ತ ಎಷ್ಟು ಎಂಬುದರ ವಿವರ ಹೀಗಿದೆ ನೋಡಿ.
ಸುಮಾರು 200 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣಗೊಂಡ ‘ಗುಂಟೂರು ಕಾರಂ’ ಬಿಡುಗಡೆಗೂ ಮೊದಲೇ ಟ್ರೇಲರ್, ಟೀಸರ್ ಮೂಲಕ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಭರವಸೆ ಮೂಡಿಸಿತ್ತು. ಜಾಗತಿಕವಾಗಿ ಸುಮಾರು 2000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಲಭಿಸುತ್ತಿವೆ.
ಗುಂಟೂರು ಕಾರಂ ಬಿಡುಗಡೆಗೊಂಡು ಇಂದಿಗೆ ಒಂದು ವಾರ ಕಳೆದಿದ್ದು, ವಾರಾಂತ್ಯಕ್ಕೆ ಸಿನಿಮಾ ಜಾಗತಿಕ 212 ಕೋಟಿ ರೂ. ಗಳಿಸಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ವಾರಾಂತ್ಯದಲ್ಲಿ ಚಿತ್ರ ಮತ್ತಷ್ಟು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರಗಳು ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಗುಂಟೂರು ಕಾರಂ ಚಿತ್ರದಲ್ಲಿ ಸ್ಯಾಂಡಲ್ವುಡ್ ಬ್ಯೂಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣನ್, ಪ್ರಕಾಶ್ ರಾಜ್, ಈಶ್ವರಿ ರಾವ್, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).