ಆಂಧ್ರಪ್ರದೇಶ: ಇತ್ತೀಚೆಗಷ್ಟೇ ತೆರೆಕಂಡ 'ಗುಂಟೂರು ಕಾರಂ' ಚಿತ್ರದ ಮೂಲಕ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿ, ಸಿನಿಪ್ರೇಕ್ಷಕರನ್ನು ಮನರಂಜಿಸಿದ ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು, ಇದೀಗ ಒಂದು ಹೆಸರಾಂತ ಬ್ರ್ಯಾಂಡ್ಗೆ ಕೇವಲ ಐದು ಸೆಕೆಂಡ್ ಧ್ವನಿ ನೀಡುವ ಮೂಲಕ ಬರೋಬ್ಬರಿ ಐದು ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಸಂಗತಿ ಅವರ ಅಭಿಮಾನಿಗಳು ಹಾಗೂ ಅನೇಕರ ಹುಬ್ಬೇರುವಂತೆ ಮಾಡಿದೆ.
ಬ್ರ್ಯಾಂಡ್ ಕಂಪನಿಗಳು ಅಧಿಕವಾಗಿ ದಕ್ಷಿಣ ಭಾರತದ ಸ್ಟಾರ್ ನಟ ಅಥವಾ ನಟಿಯರನ್ನು ಮುಖವಾಣಿಯಾಗಿ ಬಳಸಿಕೊಳ್ಳುವುದನ್ನು ಈ ಹಿಂದೆಯೂ ಅನೇಕ ಜಾಹಿರಾತು ಸೇರಿದಂತೆ ಇತರೆ ಪುಟಗಳಲ್ಲಿ ನೋಡಿದ್ದೇವೆ. ಸಾಮಾನ್ಯವಾಗಿ ದೊಡ್ಡ ಸಂಸ್ಥೆಗಳು ಮೊದಲು ಮುಖ ಮಾಡುವುದೇ ಸೌತ್ ಸ್ಟಾರ್ಗಳತ್ತ. ಈ ಪೈಕಿ 'ಫೋನ್ ಪೇ' ಡಿಜಿಟಲ್ ಪೇಮೆಂಟ್ಸ್ ಬ್ರ್ಯಾಂಡ್ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರನ್ನು ಐದು ಸೆಕಂಡ್ ಧ್ವನಿಗಾಗಿ ಸಂಪರ್ಕಿಸಿದ್ದು, ತಮ್ಮ ಯುಪಿಐ ಅಪ್ಲಿಕೇಶನ್‌ಗೆ ವಾಯ್ಸ್ ಸ್ವೀಕರಿಸಿದೆ.
ಫೋನ್ ಪೆ ಯುಪಿಐಗೆ ಧ್ವನಿ ನೀಡಿದ ಪ್ರಿನ್ಸ್, ಈ ಬ್ರ್ಯಾಂಡ್‌ಗಾಗಿ ಕೇವಲ 5 ಸೆಕೆಂಡ್‌ಗಳ ಧ್ವನಿ ನೀಡಿದ್ದಾರೆ. AI ರಚಿತ ಧ್ವನಿಯೊಂದಿಗೆ ಸಂಯೋಜಿಸಲಿರುವ ಈ ವಾಯ್ಸ್ ಓವರ್ಗಾಗಿ ನಟ ಮಹೇಶ್ ಬರೋಬ್ಬರಿ 5 ಕೋಟಿ ರೂ.ಗಳ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಸ್ಮಾರ್ಟ್ ಸ್ಪೀಕರ್‌ಗಳಲ್ಲಿನ ವಹಿವಾಟಿನ ಸಮಯದಲ್ಲಿ ಫೋನ್‌ಪೇ ಬಳಕೆದಾರರಿಗೆ ಮಹೇಶ್ ಬಾಬು ಅವರ ಧ್ವನಿ ಕೇಳಿಸಲಿದೆ. ಪಾವತಿ ಮಾಡಿದ ನಂತರ ಬಳಕೆದಾರರಿಗೆ "ಧನ್ಯವಾದಗಳು, ಬಾಸ್" ಎಂಬ ಧ್ವನಿ ಕೇಳಲಿದೆ. ತಮ್ಮ ಪಾವತಿಗಳು ಯಶಸ್ವಿಯಾಗಿ ಆಗಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಗ್ರಾಹಕರಿಗೆ ಭರವಸೆಯಾಗಿ ಈ ಆಯ್ಕೆಯನ್ನು ಸಂಸ್ಥೆ ಅಳವಡಿಸಿಕೊಂಡಿದೆ,(ಏಜೆನ್ಸೀಸ್).