ನ್ಯೂಸ್

ವರದಹಳ್ಳಿಯ ಮಹಾಯೋಗಿ ಭಗವಾನ್ ಶ್ರೀ ಶ್ರೀಧರರು

ವಿದ್ವಾನ್ ವೆಂಕಟರಮಣ ದೇವರು ಭಟ್ಟ

ನಮ್ಮ ಸಮಾಜವು ಇತ್ತೀಚಿನ ದಿನಗಳಲ್ಲಿ ಪ್ರತ್ಯಕ್ಷ ನೋಡಿದ ಮಹಾಸಾಧಕ ಯತಿವರೇಣ್ಯರು ಭಗವಾನ್ ಶ್ರೀಧರಸ್ವಾಮಿಗಳು. ಧಮೋದ್ಧಾರಕ್ಕಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಅವರ ಸಂಪೂರ್ಣ ಜೀವನ ಅರ್ಪಿತ. ದತ್ತಾವತಾರಿಗಳೆಂದೇ ಪ್ರಸಿದ್ಧರಾದ ವರದಹಳ್ಳಿಯ ಸಾಧಕವರೇಣ್ಯರಾದ ಭಗವಾನ್ ಶ್ರೀಧರ ಸ್ವಾಮಿಗಳು ತಮ್ಮ ಜೀವನ ಸಾಧನೆ, ತಪಸ್ಸು, ಉಪದೇಶಗಳ ಮೂಲಕ ಲೋಕಕಲ್ಯಾಣವನ್ನು ಮಾಡಿದ ಮಹಾಮಹಿಮರು. ಅವರು ಪ್ಲವಂಗ ಸಂವತ್ಸರ ಮಾರ್ಗಶೀರ್ಷಮಾಸ ಶುಕ್ಲಪಕ್ಷ ಪೂರ್ಣಿಮೆ ಗುರುವಾರ ದತ್ತಜಯಂತಿಯಂದು (19-12-1907) ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಂಚಿಂಚೋಳಿ ಗ್ರಾಮದಲ್ಲಿ ಜನಿಸಿದರು. ಪ್ರಮಾದಿ ಸಂವತ್ಸರ ಚೈತ್ರಮಾಸದ ಕೃಷ್ಣಪಕ್ಷದ ಬಿದಿಗೆ ಗುರುವಾರದಂದು (19-04-1973) ವರದಹಳ್ಳಿಯಲ್ಲಿ ಬ್ರಹ್ಮಲೀನರಾದರು.

ಏಕಾಂತಪ್ರಿಯರೂ ಸದಾತ್ಮಧ್ಯಾನನಿರತರೂ ಆಗಿ ಅಧ್ಯಾತ್ಮಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಶ್ರೀಧರರು ಅನೇಕ ಗ್ರಂಥಗಳನ್ನು, ಸ್ತೋತ್ರಗಳನ್ನು, ಉಪದೇಶಾತ್ಮಕ ಪತ್ರಗಳನ್ನು ಬರೆದಿದ್ದಾರೆ, ಅವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್, ಮರಾಠಿ ಹೀಗೆ ವಿವಿಧಭಾಷೆಗಳಲ್ಲಿ ನಿಷ್ಣಾತರು. ಪ್ರವಚನಗಳ ಮೂಲಕ ಅಧ್ಯಾತ್ಮತತ್ತ್ವವನ್ನು ಅನುಗ್ರಹಿಸಿದ್ದಾರೆ. ರಾಷ್ಟ್ರದ ಮಹತ್ವವನ್ನು ಭಾವಭರಿತರಾಗಿ ತಾದಾತ್ಮ್ಯದಿಂದ ವರ್ಣಿಸಿದ್ದಾರೆ. ಶ್ರೀರಾಮನ ತತ್ತ್ವವನ್ನು ಪರಿಪೂರ್ಣ ಅನುಭವಿಸಿದ ಮಹರ್ಷಿ ವಾಲ್ಮೀಕಿಗಳು, ಸಮರ್ಥರಾಮದಾಸರು, ಭದ್ರಾಚಲರಾಮದಾಸರು, ಶ್ರೀತ್ಯಾಗರಾಜರು ಮುಂತಾದವರ ಶಬ್ದಸಾಹಿತ್ಯವನ್ನು ಇದು ನೆನಪಿಗೆ ತರುವುದು. ಶ್ರೀಧರರ ಜೀವನ-ಸಾಧನೆ-ಉಪದೇಶಗಳು ಸಾಮಾನ್ಯ ಜನರನ್ನೂ ಅಧ್ಯಾತ್ಮಲೋಕಕ್ಕೆ ಕರೆದೊಯ್ಯುವ ದಾರಿದೀಪಗಳಾಗಿವೆ.

ಶ್ರೀಧರರಿಗೆ ಬಾಲ್ಯದಿಂದಲೂ ಭಾರತೀಯ ಸನಾತನಧರ್ಮದ ಬಗ್ಗೆ ಅಪಾರ ಶ್ರದ್ಧೆ, ಗೌರವ. ‘ಆರ್ಯಸಂಸ್ಕೃತಿ’ ಎಂಬ ತಮ್ಮ ಗ್ರಂಥದಲ್ಲಿ ಸಮಗ್ರ ಭಾರತೀಯ ಪರಂಪರೆ, ಚಿಂತನೆ, ಆಚರಣೆಗಳ ಕುರಿತಾಗಿ ತಾತ್ವಿಕ ಹಿನ್ನೆಲೆ ಮತ್ತು ಮಹತ್ತ ್ವಳ ಆಳ-ಅಗಲವನ್ನು ತಿಳಿಸಿಕೊಟ್ಟಿದ್ದಾರೆ. ಮತ್ತು ಭಾರತೀಯ ಜ್ಞಾನವೈಭವದ ಬಗ್ಗೆ ವಿದೇಶಿ ತತ್ತ ್ವ್ಞಾನಿಗಳು, ವಿದ್ವಾಂಸರು ಮೆಚ್ಚಿ ಬರೆದಿರುವುದನ್ನು ವಿವರಿಸಿದ್ದಾರೆ. ಅಲ್ಲದೆ, ಸಕಲದೇವತೆಗಳನ್ನು ಏಕೋಭಾವದಿಂದ ಪೂಜಿಸುವ ಭಾರತೀಯ ಚಿಂತನೆಯನ್ನು ಜನಸಾಮಾನ್ಯರಿಗೂ ಅರಿಯಲು ಅನುಕೂಲವಾಗುವಂತೆ ಎಲ್ಲ ದೇವತೆಗಳ ಕುರಿತಾಗಿ ಸ್ತೋತ್ರಕಾವ್ಯವನ್ನು ಸರಳವಾಗಿ ಇವರು ರಚಿಸಿದ್ದಾರೆ. ಉತ್ಕೃಷ್ಟವಾದ ಪ್ರವಚನಗಳನ್ನು ಅನುಗ್ರಹಿಸಿ ಜ್ಞಾನಶಕ್ತಿಯನ್ನು ಜಾಗೃತಗೊಳಿಸಿದ್ದಾರೆ.

ಶ್ರೀಧರರು ಮಹಾನ್ ಸಾಧಕರು. ಸದಾ ಶ್ರೀರಾಮನ ಜಪದಲ್ಲಿ ನಿರತರು. ಮಹಾರಾಷ್ಟ್ರದ ಸಜ್ಜನಗಡದಲ್ಲಿ ಸಮರ್ಥರಾಮದಾಸರ ಸೇವೆಯಲ್ಲಿ ತೊಡಗಿಸಿಕೊಂಡು ಕಠಿಣವ್ರತವನ್ನು ಅನುಸರಿಸಿ ಅವರ ಅನುಗ್ರಹಕ್ಕೆ ಪಾತ್ರರಾದರು. ಮುಂದೆ ಅವರ ಅಪ್ಪಣೆಯಂತೆ ದಕ್ಷಿಣಭಾರತದಲ್ಲಿ ಸಾಗರದ ಸಮೀಪದ ವರದಹಳ್ಳಿಯಲ್ಲಿ ನೆಲೆನಿಂತು ಶಿಷ್ಯರ ಅನುಗ್ರಹ ಮತ್ತು ಧರ್ಮಪ್ರಚಾರ ಕಾರ್ಯವನ್ನು ಮಾಡಿದರು. ಜಾತಿ-ಮತ, ಬಡವ-ಬಲ್ಲಿದ ಎನ್ನದೆ ಎಲ್ಲರನ್ನೂ ಸಮನಾಗಿ ಪ್ರೀತಿಯಿಂದ ಕಂಡು ಅನುಗ್ರಹಿಸಿದ್ದಾರೆ, ಉಪದೇಶಿಸಿದ್ದಾರೆ. ಪ್ರಯಾಣಕ್ಕೆ ಸೌಕರ್ಯ ಕಡಿಮೆ ಇದ್ದ ಆ ಕಾಲದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿ ಪುಣ್ಯಕ್ಷೇತ್ರಗಳಲ್ಲಿ ತಪಸ್ಸನ್ನು ಮಾಡಿದ್ದಾರೆ. ಊರೂರನ್ನು ಸುತ್ತಿ ಜನರ ಕಷ್ಟಕೋಟಲೆಗಳನ್ನು ಕೇಳಿ, ಸ್ಪಂದಿಸಿ, ತಮ್ಮ ದಿವ್ಯತಪಶ್ಶಕ್ತಿಯಿಂದ ಪರಿಹರಿಸಿದ್ದಾರೆ. ಇಂದಿಗೂ ಹಳ್ಳಿ-ಹಳ್ಳಿಗಳಲ್ಲಿ ಶ್ರೀಧರರ ದಿವ್ಯಶಕ್ತಿ, ಪವಾಡ ಮತ್ತು ಲೋಕಕಲ್ಯಾಣ ಕಾರ್ಯಗಳು ಜನಜನಿತ. ದೇವಿಯ ಶಕ್ತಿಯ ಕೇಂದ್ರವಾದ ಪ್ರಸಿದ್ಧ ಕರಿಕಾನಪರಮೇಶ್ವರಿ ದೇವಾಲಯದ ಜೀಣೋದ್ಧಾರ ಮಾಡಿಸಿದರು. ಎಲ್ಲ ಮುಖ್ಯ ತೀರ್ಥಗಳನ್ನು ಆವಾಹನೆ ಮಾಡಿ, ತಮ್ಮ ತಪಃಶಕ್ತಿಯನ್ನು ಧಾರೆ ಎರೆದು ಸರ್ವವ್ಯಾಧಿ ನಿವಾರಕ ಶ್ರೀಧರ ತೀರ್ಥವನ್ನು ಲೋಕಾರ್ಪಣೆ ಮಾಡಿದರು. ಇಂದಿಗೂ ಸಾವಿರಾರು ಭಕ್ತರು ಸಂಕಲ್ಪಮಾಡಿ ಈ ತೀರ್ಥದಲ್ಲಿ ಮಿಂದು ತಮ್ಮ ಸಂಕಟಗಳನ್ನು ಪರಿಹರಿಸಿಕೊಂಡು ಧನ್ಯತೆಯನ್ನು ಅನುಭವಿಸುತ್ತಿದ್ದಾರೆ.

ಶ್ರೀಧರರ ಮಂತ್ರಾಕ್ಷತೆಯೂ ಅಸಾಧಾರಣ ತಪೋಬಲದ ಶಕ್ತಿಯನ್ನು ಹೊಂದಿದೆ. ಈ ಮಂತ್ರಾಕ್ಷತೆಯು ಕಷ್ಟಗಳನ್ನು ದೂರಮಾಡುತ್ತದೆ. ವಿಶ್ವಧರ್ಮದ ರಕ್ಷಣೆಗಾಗಿ ದೇವತೆಗಳ ಆವಾಹನೆ ಮಾಡಿ ಧರ್ಮಧ್ವಜವನ್ನು ವರದಹಳ್ಳಿಯಲ್ಲಿ ಸ್ಥಾಪಿಸಿದರು. ಶ್ರೀಧರರಿಗೆ ಗೋವುಗಳನ್ನು ಕಂಡರೆ ಪರಮ ಆದರ. ಪುಣ್ಯಸಂಪಾದನೆಗಾಗಿ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗಾಗಿ ಗೋಸೇವೆಯ ಮಹತ್ವವನ್ನು ತಿಳಿಹೇಳಿದರು.

ದೀನದಲಿತರಿಗೆ ಉಪದೇಶ: ಮಠದಲ್ಲಿ ಮತ್ತು ಊರಿನಲ್ಲಿ ಕೂಲಿಮಾಡಿ ಜೀವಿಸುವಂತಹ ಕೆಲವು ಬಿಡಾರಗಳು ಅಲ್ಲಿದ್ದವು. ಇವರು ದಿನವಿಡೀ ಕಷ್ಟಪಟ್ಟು ಕೂಲಿಮಾಡಿ ಜೀವಿಸುವುದಾಗಿತ್ತು. ಒಂದು ದಿನ ಶ್ರೀಧರರು ಇವರನ್ನು ಕಂಡು, ‘ಏನು ಕಷ್ಟ ಜೀವನ. ಇವರ ಆಯುಷ್ಯವಿಡೀ ಇದರಲ್ಲೇ ಕಳೆದುಹೋಗುವುದಲ್ಲ!’ ಹೀಗೆ ಯೋಚಿಸಿ ಅವರನ್ನು ಕರೆದು ಅತೀವ ದಯಾರ್ದ್ರ ದೃಷ್ಟಿಯಿಂದ ‘ಮಕ್ಕಳಿರಾ, ನೋಡಿ! ನೀವು ಇಷ್ಟೆಲ್ಲ ದಿನವಿಡೀ ಕಷ್ಟಪಡುತ್ತಲಿದ್ದೀರಿ. ಇದರಲ್ಲೇ ಆಯುಷ್ಯವು ಕಳೆದು ಹೋಗಿಬಿಡುವುದು. ನಿಜವಾದ ಸುಖವೆಂಬುವುದು ಬೇರೆಯೇ ಇದ್ದು ಅದು ಪರಮಾತ್ಮನ ಕೃಪೆಯಿಂದ ಲಭಿಸುವುದು. ಆದ್ದರಿಂದ ಪ್ರತಿನಿತ್ಯವೂ ಭಗವನ್ನಾಮವನ್ನು ಉಚ್ಚರಿಸಿರಿ. ಇದರಿಂದ ಭಗವಂತನ ಕೃಪೆಯಾಗುವುದು’ ಎಂದು ಹೇಳಿ ರಾಮನಾಮವನ್ನು ತಿಳಿಸಿಕೊಟ್ಟರು. ಅದರಂತೆ ಎಷ್ಟೋ ಕೂಲಿಕಾರ್ವಿುಕರು ಭಗವನ್ನಾಮವನ್ನು ಉಚ್ಚರಿಸ ತೊಡಗಿ ಭಗವದ್ಭಕ್ತರಾದರು.

ಶ್ರೀಧರ ಸ್ವಾಮಿಗಳ ವಿಷಯದಲ್ಲಿ ಇಂತಹ ಎಷ್ಟೋ ಘಟನೆಗಳು ಶ್ರೀಧರ ಚರಿತೆ ಮತ್ತು ಇಂದಿಗೂ ಜನರ ಬಾಯಿಯಿಂದ ಬಂದಿರುವ ಮಾತುಗಳಿಂದ ತಿಳಿಯಲ್ಪಡುತ್ತವೆ. ಶ್ರೀಧರರೇ ಪ್ರವಚನಗಳಲ್ಲಿ, ‘ಮಹಾತ್ಮರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ದಾಖಲಾಗಿರುತ್ತವೆ, ಕೆಲವು ದಾಖಲಾಗಿರುವುದಿಲ್ಲ’ ಎಂದು ಆಗಾಗ ಹೇಳುತ್ತಿದ್ದರು. ಮಹಾತ್ಮರ ನಡೆ-ನುಡಿಯನ್ನು ಗುರುತಿಸುವುದಕ್ಕೂ ನಮ್ಮಲ್ಲಿ ಆ ಸಂಸ್ಕಾರವಿರಬೇಕು ಮತ್ತು ನಾವು ಆ ಮಟ್ಟದ ಉನ್ನತ ಸಾಧನೆ ಮಾಡಿರಬೇಕು. ಯೋಗಿಯೇ ಯೋಗಿಯ ಹೃದಯವನ್ನು ಅರಿಯಬಲ್ಲ ಎಂಬ ನಾಣ್ಣುಡಿ ಎಷ್ಟು ಅರ್ಥಪೂರ್ಣ ಅಲ್ಲವೇ? ಶ್ರೀ ಶ್ರೀಧರ ಸ್ವಾಮಿಗಳ ದಿವ್ಯಾನುಗ್ರಹದಿಂದ ಸಮಸ್ತ ಲೋಕವು ಸುಖಿಯಾಗಿ ಆನಂದದಿಂದಿರಲಿ.

(ಲೇಖಕರು ಅಧ್ಯಾತ್ಮ ಚಿಂತಕರು)