Mahavatar Narsimha: ಇದೇ ಜು.25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಮಹಾವತಾರ ನರಸಿಂಹ' ಅನಿಮೇಟೆಡ್ ಚಿತ್ರ ಸದ್ಯ ಭಾರತೀಯ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸುತ್ತಿದೆ. ಯಾವುದೇ ಸ್ಟಾರ್ ನಟರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಭಾರತೀಯ ಚಿತ್ರೋದ್ಯಮದಲ್ಲಿ ತನ್ನದೇ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಕಲೆಕ್ಷನ್ ವಿಷಯದಲ್ಲಿ ನೋಡುವುದಾದರೆ, ಈ ಸಿನಿಮಾ ಸದ್ಯ ಭಾರತೀಯ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. 'ಮಹಾವತಾರ ನರಸಿಂಹ' ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಕನ್ನಡದ 'ಸು ಫ್ರಮ್ ಸೋ' ಚಿತ್ರದಂತೆಯೇ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಟಿಕೆಟ್‌ಗಳು ಬುಕ್ಕಿಂಗ್ ಆಗುತ್ತಿವೆ. ಬುಕ್ ಮೈ ಶೋನಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗುತ್ತಿವೆ ಎಂದು ಸಿನಿ ವರದಿ ಉಲ್ಲೇಖಿಸಿದೆ. ಈ ಚಿತ್ರವನ್ನು ಕ್ಲೀಮ್ ಪ್ರೊಡಕ್ಷನ್ಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡಿದೆ.
ಕೇವಲ 8 ದಿನಗಳಲ್ಲಿ, ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 60.5 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಭಾರತೀಯ ಅನಿಮೇಟೆಡ್ ಸಿನಿಮಾವೊಂದು ದೇಶೀಯ ಮಾರುಕಟ್ಟೆಯಲ್ಲಿ ಹಾಲಿವುಡ್ ಬ್ಲಾಕ್‌ಬಸ್ಟರ್ 'ಸ್ಪೈಡರ್ ಮ್ಯಾನ್', 'ದಿ ಇನ್‌ಕ್ರೆಡಿಬಲ್ಸ್' ಮತ್ತು 'ಕುಂಗ್ ಫೂ ಪಾಂಡಾ'ದಂತಹ ಚಿತ್ರಗಳನ್ನು ಹಿಂದಿಕ್ಕಿದ್ದು ಇದೇ ಮೊದಲು. ಇತ್ತೀಚಿನ ವರದಿಗಳ ಪ್ರಕಾರ, ದೇಶವ್ಯಾಪಿ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ಒಳ್ಳೆಯ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ,(ಏಜೆನ್ಸೀಸ್).