

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ 'ಗಣಪ' ಮತ್ತು 'ಕರಿಯ 2' ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾದ ನಟ ಸಂತೋಷ್ ಬಾಲರಾಜ್ ಇದೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ಗೆ ಮೊದಲು ಜಾಂಡೀಸ್ ಕಾಯಿಲೆ ಕಾಡಿತ್ತು. ಇದರಿಂದ ಅವರ ಆರೋಗ್ಯ ತೀರ ಹದಗೆಟ್ಟಿತು. ಒಂದಷ್ಟು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್, ಇದೀಗ ಜಾಂಡೀಸ್ನಿಂದ ಕೋಮಾಗೆ ಜಾರಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.
ಜಾಂಡೀಸ್ ವಿಪರೀತವಾದ ಕಾರಣ ಸಂತೋಷ್ ಅವರ ಆರೋಗ್ಯ ಪರಿಸ್ಥಿತಿ ತೀರ ಗಂಭೀರವಾಗಿದೆ. ಪ್ರಸ್ತುತ, ತಮ್ಮ ತಾಯಿಯೊಂದಿಗೆ ಇರುವ ನಟನಿಗೆ ಇನ್ನೂ ಮದುವೆಯಾಗಿಲ್ಲ ಎಂದು ವರದಿಯಾಗಿದೆ. ಸಂತೋಷ್ ಬಾಲರಾಜ್ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಗಣಪ', 'ಕರಿಯ 2', 'ಬರ್ಕ್ಲಿ', 'ಸತ್ಯ' ಸೇರಿದಂತೆ ಒಂದಷ್ಟು ಕನ್ನಡ ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದಾರೆ.