ನ್ಯೂಸ್

ಸತ್ ಚಿತ್ ಆನಂದ ಸ್ವರೂಪವೇ... ಶಂಭುವೇ...

Webdesk - Manjunatha B

ಶಾರದಾ ಕೌದಿ, ಧಾರವಾಡ
ಮಾಘಮಾಸ ಕೃಷ್ಣಪಕ್ಷದ ಚೌತಿಯಂದು ಬರುವ ಶಿವರಾತ್ರಿ ಶಿವನ ಆರಾಧಕರಿಗೆ ಮಹತ್ವದ ಹಬ್ಬ. ಅಜ್ಞಾನವನ್ನು ಓಡಿಸಿ ಸುಜ್ಞಾನದ ಬೆಳಕನ್ನು ನೀಡಲು, ಮನುಷ್ಯನ ಪಾಪ ಕರ್ಮಗಳನ್ನು ತೊಳೆಯಲು ಪರಮಾತ್ಮನು ಭೂಲೋಕಕ್ಕೆ ಬರುವ ದಿನ ಇದು. ಪುರಾಣದ ಪ್ರಕಾರ, ದೇವರಿಗೂ ರಾಕ್ಷಸರಿಗೂ ನಡುವೆ ನಡೆದ ಯುದ್ಧದಲ್ಲಿ ಸಮುದ್ರ ಮಥನದ ವೇಳೆ ಬಂದ ಹಾಲಾಹಲವನ್ನ ಸೇವಿಸಿ ಶಿವನು ವಿಷಕಂಠನಾದ ದಿನವಿದು. ಇನ್ನು ಬೇಡರ

ಕಣ್ಣಪ್ಪನಿಗೆ ಶಿವ ಪ್ರತ್ಯಕ್ಷನಾದ ದಿನವೂ ಶಿವರಾತ್ರಿ ಎನ್ನುತ್ತಾರೆ. ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿದರೆ ಶಿವ ಒಲಿಯುತ್ತಾನೆ ಎಂಬ ನಂಬಿಕೆ ವ್ಯಾಪಕವಾಗಿದೆ. ಸತ್ ಚಿತ್ ಆನಂದ ಸ್ವರೂಪನೂ ನಿತ್ಯಪರಿಪೂರ್ಣನೂ ಆಗಿರುವ ಶಿವನಿಗೆ ಯಾವುದೇ ಅಹಂಕಾರವಿಲ್ಲ, ಅವನು ನಿರಾಕಾರ. ಯಾವುದೇ ಗುಣಗಳು ಇಲ್ಲ, ಅವನು ನಿರ್ಗಣ, ಕಣ್ಣಿಗೆ ಕಾಣಲಾರ, ಮನಸ್ಸಿಗೆ ನಿಲುಕಲಾರ. ಅಂತೆಯೇ ಅವನು ಅಗೋಚರ,

ಅವ್ಯಕ್ತ. ಇಂತಿರುವ ಪರಮಾತ್ಮ ಇಡೀ ವಿಶ್ವವನ್ನು ವ್ಯಾಪಿಸಿಕೊಂಡಿದ್ದರೂ ವಿಶ್ವಾತೀತ. ವಿಶ್ವವನ್ನು ಸೃಷ್ಟಿಸುವ, ರಕ್ಷಿಸುವ ಹಾಗೂ ಸಂಹರಿಸುವ ಶಕ್ತಿ ಅವನಿಗಿದೆ. ಅಂತೆಯೇ ಪರಮಾತ್ಮ ಜಗವಾಗಬಲ್ಲ, ಜಗವಾಗದಿರಲೂ ಬಲ್ಲ. ಇಂಥ ಪರಶಿವನು ಲಿಂಗರೂಪದಲ್ಲಿ ಆವಿರ್ಭವಿಸಿದ್ದಾನೆ.

ಶಿವನನ್ನು ಜಲ, ಕ್ಷೀರ, ಅಮೃತ, ಎಳನೀರು, ಕಬ್ಬಿನ ಹಾಲಿನಿಂದ ಅಭಿಷೇಕ ಮಾಡುವರು. ಶಿವನಿಗೆ ಬಿಲ್ವಪತ್ರೆ ಇಷ್ಟ. ಅದರ ಮರದಲ್ಲೇ ಅವನ ವಾಸವಂತೆ. ಶಿವನಿಗೆ ತ್ರಿದಳ ಸಮರ್ಪಿಸುವ ಮಾತ್ರದಿಂದಲೇ ಪಾಪ ಸಂಹಾರ ಸಾಧ್ಯ. ‘ತ್ರಿದಳಂ ತ್ರಿಗುಣಾಕಾರಂ, ತ್ರಿನೇತ್ರಂಚ ತ್ರಿಯಾಯುಧಂ, ತ್ರಿಜನ್ಮಪಾಪ ಸಂಹಾರಂ, ಏಕಬಿಲ್ವ ಶಿವಾರ್ಪಣಂ’ ಎನ್ನುತ್ತಾರೆ. ಶಿವನ ಪೂಜೆಗೆ ಎಕ್ಕೆ ಹೂ, ತುಂಬಿ ಹೂ ವಿಶೇಷ. ಉತ್ತರಾಣಿ ಕಡ್ಡಿಯ ತುಪ್ಪದ ದೀಪವನ್ನು ಶಿವನಿಗೆ ಬೆಳಗುವರು. ಖರ್ಜೂರ ಮತ್ತು ಹಣ್ಣುಗಳ ನೈವೇದ್ಯ ಮಾಡುವರು. ಗಂಟೆ, ಜಾಗಟೆ, ಡಮರು, ಶಂಖನಾದಗಳ ಶಬ್ದಕ್ಕೆ

ರೋಗ-ರುಜಿನ, ಬಡತನ ದೂರಾಗುವವು. ಆ ದಿವ್ಯಾನುಭವದ ಸ್ಪಷ್ಟ ಅನುಭೂತಿಗೆ ಭಕ್ತಿ ಶ್ರದ್ಧೆ ಏಕಾಗ್ರತೆ ಬೇಕು. ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರ ಶಿವರಾತ್ರಿಯಂದು ಸಾವಿರಪಟ್ಟು ಶಕ್ತಿಯುತವಾಗಿರುತ್ತದೆ. ಭೋಗ ಮೋಕ್ಷಗಳೆರಡಕ್ಕೂ ಶಿವೋಪಾಸನೆ ಒಳ್ಳೆಯ ಮಾರ್ಗ. ದೇವನೊಲುಮೆಗೆ ಪಾತ್ರರಾಗಲು ನಾವು ಅರ್ಪಿಸುವ ಭಕ್ತಿ ಜಪ ತಪ ಸತ್ಯ ಶುದ್ಧವಾಗಿರಬೇಕು. ಅದಕ್ಕೇ ಬಸವಣ್ಣನವರು ತಮ್ಮ ವಚನದಲ್ಲಿ ‘ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮ ದೇವ’ ಎಂದು ಹೇಳುತ್ತಾರೆ. ಇನ್ನೊಂದು ವಚನದಲ್ಲಿ ‘ಶತಕೋಟಿ ಪಾಪವನೊರೆಸಲು ಶಿವನಾಮವೊಂದು ಸಾಲದೆ, ಹರನಾಮವೊಂದು ಸಾಲದೆ’ ಎಂದಿದ್ದಾರೆ. ದಾರ್ಶನಿಕರೆಲ್ಲ ಶಿವನಾಮ ಸ್ಮರಣೆಯ ಮಹತ್ವವನ್ನು ತಿಳಿಸಿದ್ದಾರೆ. ನಾವು ಅರ್ಪಿಸುವ ಭಕ್ತಿಯು ಆಪ್ತತೆ, ಶೂನ್ಯತೆ, ಧನ್ಯತೆಯಿಂದ ತುಂಬಿದ್ದರೆ ಸಾಕು ಆತ ಒಲಿವ. ಕಠಿಣ

ತಪಸ್ಸು ಬೇಕೆಂದಿಲ್ಲ. ರಾಕ್ಷಸರೂ ಶಿವಭಕ್ತರಾಗಿದ್ದರು. ಅವನು ಭೋಲೆನಾಥ. ಆದರೆ ಕೋಪ ಬಂದಾಗ, ಅವನಾಡುವ ಶಿವತಾಂಡವ ನೃತ್ಯ ಮೂರೂ ಲೋಕಗಳನ್ನು ತಲ್ಲಣಗೊಳಿಸುವುದು. ಶಿವನು ಅವ್ಯಕ್ತ ಜ್ಯೋತಿ ಸ್ವರೂಪನು. ಜ್ಯೋತಿರ್ಲಿಂಗಗಳ ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುವುದು. ಊರಿನ ಎಲ್ಲ ಶಿವಾಲಯಗಳಲ್ಲಿ ಶಿವರಾತ್ರಿಯಂದು ಲಿಂಗಸ್ವರೂಪಿ ಶಿವನಿಗೆ ವಿಶೇಷ ಪೂಜೆ. ಅಹೋರಾತ್ರಿ ಜನ ಶಿವನ ದರ್ಶನ ಪಡೆದು ಧನ್ಯರಾಗುವರು. ಅನೇಕ ದೇವಾಲಯಗಳಲ್ಲಿ ಇಡೀ ರಾತ್ರಿ ಸಂಗೀತ, ನೃತ್ಯ, ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದು ವಿಶೇಷ.

ಜನಪದರು ಏಳುವುದೇ ಶಿವನನ್ನು ನೆನೆಯುತ್ತ. ‘ಎದ್ದೋನೆ ನಿಮ್ ಗ್ಯಾನ, ಏಳುತಲೆ ನಿಮ್ ಗ್ಯಾನ, ಸಿದ್ಧರ ಗ್ಯಾನ ಶಿವಗ್ಯಾನ! ಮಾ ಶಿವನೆ, ನಿದ್ದೇಗಣ್ಣಾಗೆ ನಿಮ್ಮ ಗ್ಯಾನ...’ ಎಂಬ ಪದಗಳು ಜನಪ್ರಿಯವಾಗಿವೆ. ಹಳ್ಳಿಯ ಗರತಿ ಬೀಸುವಾಗಲೂ ಶಿವನನ್ನು ಪ್ರಾರ್ಥಿಸುವ ರೂಢಿ ಇದೆ. ‘ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ, ಕಲ್ಲು ಬಂದೆರಗಿ ಕಡೆಗಾಗಿ, ಎಲೆ ಮನವೆ, ಶಿವನೆಂಬ ಶಬುದ ಬಿಡಬ್ಯಾಡ...’ ಎನ್ನುತ್ತಾ ಬೀಸುತ್ತಾಳೆ.

ಹಾಲಾಹಲವನ್ನು ಕುಡಿದು ಸಮಚಿತ್ತ ಕಾಪಾಡಿಕೊಂಡ ಶಿವನು ‘ಜೀವನದಲ್ಲಿ ಬರುವ ಕಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು’ ಎಂದು ನಮಗೆಲ್ಲ ಸಂದೇಶ ನೀಡುತ್ತಾನೆ. ಪೌರಾಣಿಕ ಸಂಗತಿಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ಅರ್ಥೈಸಿದಾಗ ಅವುಗಳ ಮೌಲ್ಯ ಹೆಚ್ಚುವುದು. ಈ ನಿಟ್ಟಿನಲ್ಲಿ ಇದು ಕೇವಲ ಜಾಗರಣೆ ಹಬ್ಬವಾಗದೇ ಜಾಗೃತಿಯ ಹಬ್ಬವಾಗಲಿ.