ನ್ಯೂಸ್

Maharashtra Government | ಪ್ರಧಾನಿ ಮೋದಿ 75 ನೇ ಜನ್ಮದಿನ; ಬಸ್ ಡಿಪೋಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ನಿರ್ಧರಿಸಿದ ಮಹಾರಾಷ್ಟ್ರ ಸರ್ಕಾರ !

Maharashtra Government: ಪ್ರಧಾನ ಮಂತ್ರಿ ನರೇಂದ್ರ ಮೋದಿ 75 ನೇ ಹುಟ್ಟುಹಬ್ಬದ ಅಂಗವಾಗಿ, ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮವು ರಾಜ್ಯಾದ್ಯಂತ 75 ಪ್ರಮುಖ ಬಸ್ ಡಿಪೋಗಳಲ್ಲಿ ಉಚಿತ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸಲಿದೆ ಎಂದು ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಶನಿವಾರ (ಸೆ 13) ಘೋಷಿಸಿದ್ದಾರೆ.

ಈ ವ್ಯವಸ್ಥೆಯಡಿಯಲ್ಲಿ ಎಲ್ಲಾ ಸೇವೆಗಳು ಉಚಿತವಾಗಿರುತ್ತವೆ ಎಂದು ಸರ್ನಾಯಕ್ ತಿಳಿಸಿದ್ದು, ಈ ಗ್ರಂಥಾಲಯಗಳು ಬಸ್ ಡಿಪೋಗಳಲ್ಲಿ ಜ್ಞಾನದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ, ಮರಾಠಿ ಸಾಹಿತ್ಯದ ಪರಂಪರೆಯನ್ನು ಜೀವಂತವಾಗಿರಿಸುತ್ತವೆ ಮತ್ತು ಜನರಲ್ಲಿ ಮಾಹಿತಿ ಹಂಚಿಕೆಯ ಸಂಸ್ಕೃತಿಯನ್ನು ಬೆಳೆಸುತ್ತವೆ ಎಂದರು. ಪ್ರಧಾನಿ ಮೋದಿ ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಉಪಕ್ರಮಗಳನ್ನು ನಿರಂತರವಾಗಿ ಬೆಂಬಲಿಸುತ್ತಿದ್ದು, ಬಸ್ ಡಿಪೋಗಳಲ್ಲಿ 'ವಚನ ಕಟ್ಟಾಸ್' (ಓದುವ ಮೂಲೆಗಳು) ರಚಿಸುವ ಈ ಪ್ರಯತ್ನವು ಅವರ ಕೊಡುಗೆಯನ್ನು ಆಚರಿಸುವ ಮತ್ತು ಜನರಿಗೆ ಅನನ್ಯ ಉಡುಗೊರೆಯನ್ನು ನೀಡುವ ನಮ್ಮ ಸರ್ಕಾರದ ಮಾರ್ಗವಾಗಿದೆ ಎಂದರು.

ಈ ಯೋಜನೆ ಮರಾಠಿ ಸಾಹಿತ್ಯವನ್ನು ಉತ್ತೇಜಿಸುವುದರೊಂದಿಗೆ, ನಾಗರಿಕರಿಗೆ ಸುಲಭವಾಗಿ ಓದಲು ಸ್ಥಳಗಳನ್ನು ಸೃಷ್ಟಿಸುವ ಮಹತ್ವದ ಗುರಿ ಹೊಂದಿದೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಜನ್ಮ ಅಮೃತಮಹೋತ್ಸವವನ್ನು ಸಾರ್ವಜನಿಕರಿಗೆ ನೆರವಾಗುವ ಉಪಕ್ರಮದೊಂದಿಗೆ ಆಚರಿಸಬೇಕು ಎಂಬ ವಿಶಿಷ್ಟ ಚಿಂತನೆಯ ಹಿನ್ನಲೆಯಲ್ಲಿ ಸಂಸದ ಶ್ರೀಕಾಂತ್ ಶಿಂಧೆ ಮತ್ತು ಹಿರಿಯ ಬಿಜೆಪಿ ನಾಯಕ ವಿನಯ್ ಸಹಸ್ರಬುದ್ಧೆ ಈ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ. ಈ ಯೋಜನೆಯು ಓದುವ ಹವ್ಯಾಸವನ್ನು ಪ್ರೋತ್ಸಾಹಿಸುವುದಲ್ಲದೆ ಮರಾಠಿ ಭಾಷೆಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಬಲಪಡಿಸುತ್ತದೆ ಎಂದ ಸಚಿವ ಸರ್ನಾಯಕ್ ತಿಳಿಸಿದರು.

ಪ್ರತಿಯೊಂದು ಗ್ರಂಥಾಲಯವು ವಿ.ಎಸ್. ಖಂಡೇಕರ್, ವಿ.ವಿ. ಶಿರ್ವಾಡ್ಕರ್, ನಾರಾಯಣ್ ಸುರ್ವೆ ಮತ್ತು ಪಿ.ಎಲ್. ದೇಶಪಾಂಡೆ ಸೇರಿದಂತೆ ಪ್ರಸಿದ್ಧ ಮರಾಠಿ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಒಳಗೊಂಡಿರುತ್ತದೆ. ನಾಮದಿಯೋ ಧಸಾಲ್, ಭಾಲಚಂದ್ರ ನೇಮಾಡೆ, ಶಂಕರ್ ಪಾಟೀಲ್, ವಿ.ಪಿ. ಕಾಳೆ ಮತ್ತು ವಿಶ್ವಾಸ್ ಪಾಟೀಲ್ ಅವರಂತಹ ಪ್ರಸಿದ್ಧ ಬರಹಗಾರರ ಕಾದಂಬರಿಗಳನ್ನು ಸಹ ಲಭ್ಯವಾಗುವಂತೆ ಮಾಡಲಾಗುತ್ತದೆ. ನಾಗರಿಕರು ಆಯಾ ಡಿಪೋಗಳಲ್ಲಿ ಎಸ್‌ಟಿ ಸಿಬ್ಬಂದಿಯೊಂದಿಗೆ ನೋಂದಾಯಿಸಿದ ನಂತರ ಪುಸ್ತಕಗಳನ್ನು ಎರವಲು ಪಡೆದು, ಅದನ್ನು ಓದಿದ ನಂತರ ಹಿಂತಿರುಗಿಸಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಗ್ರಂಥಾಲಯಗಳು, ಮಹಾರಾಷ್ಟ್ರ ಲೋಕಸೇವಾ ಆಯೋಗ (MPSC) ಮತ್ತು ಕೇಂದ್ರ ಲೋಕಸೇವಾ ಆಯೋಗ (UPSC) ಅಗತ್ಯವಾದ ಉಲ್ಲೇಖ ಪುಸ್ತಕಗಳನ್ನು ಸಂಗ್ರಹಿಸುತ್ತವೆ. ಇದರ ಜೊತೆಗೆ, ಪ್ರಯಾಣಿಕರು ಮತ್ತು ಸ್ಥಳೀಯರು ಸಾಹಿತ್ಯ ಕೃತಿಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ದಿನಪತ್ರಿಕೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಉಪಕ್ರಮವು ಬಸ್ ಡಿಪೋಗಳನ್ನು ಸಾಂಸ್ಕೃತಿಕ ಕೇಂದ್ರಗಳಾಗಿ ಪರಿವರ್ತಿಸುವುದರೊಂದಿಗೆ, ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಮರಾಠಿ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಎಲ್ಲಾ 75 ಡಿಪೋಗಳಲ್ಲಿ ಗ್ರಂಥಾಲಯಗಳು ಏಕಕಾಲದಲ್ಲಿ ತೆರೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)