ಮುಂಬೈ: ಈಗಾಗಲೇ ಕರೊನಾದ ಎರಡನೇ ಅಲೆಯನ್ನು ಎದುರಿಸುತ್ತಿರುವ ಮಹಾರಾಷ್ಟ್ರ ಕರೊನಾದ ಮೂರನೇ ಅಲೆಗೂ ಸಿದ್ಧತೆ ಆರಂಭಿಸಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಸೋಂಕು ತಗುಲುವ ಸಾಧ್ಯತೆಯಿರುವುದರಿಂದಾಗಿ ಮಕ್ಕಳ ಕೋವಿಡ್ ಕೇಂದ್ರ ನಿರ್ಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ.
ಮೂರನೇ ಅಲೆಯಲ್ಲಿ 18 ವರ್ಷಕ್ಕಿಂತ ಕೆಳಗಿನವರಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆಯಿದೆ. ಚಿಕ್ಕ ವಯಸ್ಸಿನ ಮಕ್ಕಳನ್ನು ನಾವು ಕೋವಿಡ್ ಕೇಂದ್ರಗಳಲ್ಲಿ ಒಬ್ಬಂಟಿಯಾಗಿ ಬಿಡಲಾಗುವುದಿಲ್ಲ. ಅವರ ತಾಯಿಯೂ ಅವರ ಜತೆ ಇರಬೇಕಾಗುತ್ತದೆ. ಸಾಮಾನ್ಯರಿಗೆ ಬಳಸುವ ವೆಂಟಿಲೇಟರ್ಗಳನ್ನು ಮಕ್ಕಳಿಗೆ ಬಳಸಲಾಗುವುದಿಲ್ಲ. ಅವರಿಗಾಗಿ ವಿಶೇಷ ವೆಂಟಿಲೇಟರ್ ಬೇಕಾಗುತ್ತದೆ. ಆ ಎಲ್ಲ ತಯಾರಿಯನ್ನು ನಮ್ಮ ಸರ್ಕಾರ ಮಾಡಿಕೊಳ್ಳಲಾರಂಭಿಸಿದೆ. ಮೂರನೇ ಅಲೆ ಮೇಲ್ವಿಚಾರಣೆಗೆ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.
ಮೂರನೇ ಅಲೆ ಮೊದಲು ಮತ್ತು ಎರಡನೇ ಅಲೆಗಿಂತ ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲನೇ ಅಲೆಯಲ್ಲಿ ವಯಸ್ಕರು ಹೆಚ್ಚು ಸಮಸ್ಯೆಗೆ ಸಿಲುಕಿದರು, ಎರಡನೇ ಅಲೆಯಲ್ಲಿ ಮಧ್ಯಮ ವಯಸ್ಕರಿಗೆ ಸಮಸ್ಯೆ ಉಂಟಾಗಿದೆ, ಅದೇ ರೀತಿ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಆಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. (ಏಜೆನ್ಸೀಸ್)