ಮುಂಬೈ: ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ ಕರೊನಾ ಗುಣಪಡಿಸುವ ಕರೊನಿಲ್ ಔಷಧವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ವಿವಾದವೂ ಸೃಷ್ಟಿಯಾಗಿದೆ.
ಆಯುಷ್ ಇಲಾಖೆ, ಭಾರತೀಯ ವೈದ್ಯಕೀಯ ಮಂಡಳಿಗಳು ಈ ಮಾತ್ರೆಗಳಿಂದ ಅಂತರ ಕಾಯ್ದುಕೊಂಡಿವೆ. ಸದ್ಯ ಯಾವುದೇ ರೀತಿಯ ಪ್ರಚಾರ ಕೊಡಬೇಡಿ ಎಂದು ಕೇಂದ್ರ ಸರ್ಕಾರವೂ ಸೂಚನೆ ನೀಡಿದೆ. ಈ ಮಧ್ಯೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಯೋಗ ಗುರು ರಾಮ್ದೇವ್ ಅವರಿಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಪತಂಜಲಿ ಸಂಸ್ಥೆ ಹೊರತಂದ ಕರೊನಿಲ್ ಒಂದು ನಕಲಿ ಔಷಧವಾಗಿದ್ದು, ಮಹಾರಾಷ್ಟ್ರದಲ್ಲಿ ಇದರ ಮಾರಾಟಕ್ಕೆ ಯಾವ ಕಾರಣಕ್ಕೂ ಅನುಮತಿ ನೀಡುವುದಿಲ್ಲ, ಇದು ಯೋಗ ಗುರು ಬಾಬಾ ರಾಮ್ದೇವ್ಗೆ ನನ್ನ ಖಡಕ್ ಎಚ್ಚರಿಕೆ ಎಂದು ಟ್ವೀಟ್ ಮಾಡಿದ್ದಾರೆ.
ಕರೊನಿಲ್ ಆಯುರ್ವೇದ ಔಷಧಿಯ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿದೆ ಎಂದು ಪತಂಜಲಿ ಸಂಸ್ಥೆ ಹೇಳಿದೆ. ಆದರೆ ಅದು ನಿಜಕ್ಕೂ ಆಗಿದೆಯಾ? ಇಲ್ಲವಾ ಎಂಬುದನ್ನು ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಸೈನ್ ಪರೀಕ್ಷೆ ಮಾಡಲಿದೆ ಎಂದು ಅನಿಲ್ ದೇಶ್ಮುಖ್ ಹೇಳಿದ್ದಾರೆ. ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!
ಹಾಗೇ ಕರೊನಿಲ್ ಔಷಧದಿಂದ ಅಂತರ ಕಾಯ್ದುಕೊಂಡು, ಪ್ರಚಾರ ಮಾಡಬೇಡಿ ಎಂದು ಸೂಚನೆ ನೀಡಿದ ಆಯುಷ್ ಇಲಾಖೆಯ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ.
ಔಷಧಿಯ ಕ್ಲಿನಿಕಲ್ ಪ್ರಯೋಗದ ಬಗ್ಗೆ ಸರಿಯಾದ ಮಾಹಿತಿ ತಿಳಿಸದೆ, ಅದರ ಮಾದರಿ, ಅಳತೆ, ನೋಂದಣಿಯ ವಿವರಗಳನ್ನೇನೂ ಹೇಳದೆ, ಒಮ್ಮೆಲೇ ಬಂದು ಕರೊನಾ ಗುಣಪಡಿಸಲು ಔಷಧಿ ಕಂಡುಹಿಡಿದಿದ್ದೇವೆ. ಅದರಿಂದ ಹಲವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿಬಿಟ್ಟರೆ, ಅದನ್ನೆಲ್ಲ ಒಪ್ಪಲಾಗದೆ. ಈ ವಿಚಾರದಲ್ಲಿ ಆಯುಷ್ ಇಲಾಖೆಯ ಕ್ರಮ ಸ್ವಾಗತಾರ್ಹ. ಪ್ರಚಾರ ಮಾಡದಂತೆ ಸೂಚನೆ ನೀಡಿ ಒಳ್ಳೆಯ ಕೆಲಸ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಕರೊನಾ ಮಣಿಸಲು ಸಾಸಿವೆ ಎಣ್ಣೆ ಅದ್ಭುತ ಮದ್ದು; ಪೊಲೀಸರು ಕಂಡುಕೊಂಡ ಔಷಧಿ ಇದು…
ಕರೊನಿಲ್ ಔಷಧಿಗೆ ಬಳಸಲಾದ ಅಂಶಗಳನ್ನು ತಿಳಿಸುವಂತೆ ಪತಂಜಲಿ ಸಂಸ್ಥೆಗೆ ಕೇಂದ್ರ ಸರ್ಕಾರ ತಿಳಿಸಿದೆ. (ಏಜೆನ್ಸೀಸ್)