ನ್ಯೂಸ್

ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಕ್ಕಿಬಿದ್ದ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿದ ಗೃಹ ಸಚಿವ!

ಮುಂಬೈ: ಮಹಾರಾಷ್ಟ್ರದ ಗೃಹ ಸಚಿವ ಅನಿಲ್​ ದೇಶ್​ಮುಖ್​ ಸೋಮವಾರದಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅವರ ವಿರುದ್ಧ ಬಾಂಬೆ ಹೈ ಕೋರ್ಟ್​ ಸಿಬಿಐ ತನಿಖೆ ಆದೇಶಿಸಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರಾಜೀನಾಮೆ ಕೊಡುವುದಕ್ಕೂ ಮುನ್ನ ಅನಿಲ್​ ಅವರು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅದಾದ ಮೇಲೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಡಲಾಗಿದೆ. ಅದರ ಮಾಹಿತಿಯನ್ನು ಎನ್​ಸಿಪಿ ಸಚಿವ ನವಾಬ್​ ಮಲಿಕ್​ ಅವರು ಹಂಚಿಕೊಂಡಿದ್ದಾರೆ.

ಅನಿಲ್​ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್​ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಮುಂಬೈನ ಬಾರ್​ ಮತ್ತು ಹೋಟೆಲ್​ಗಳಿಂದ ಮಾಸಿಕ 100 ಕೋಟಿ ರೂಪಾಯಿ ಸಂಗ್ರಹಿಸಿ ಎಂದು ಅನಿಲ್​ ಅವರು ಸಚಿನ್​ ವಾಜೆ ಮತ್ತು ಇತರ ಪೊಲೀಸ್​ ಅಧಿಕಾರಿಗಳಿಗೆ ಹೇಳಿದ್ದರು ಎಂದು ಆರೋಪದಲ್ಲಿ ತಿಳಿಸಲಾಗಿದೆ. ಈ ಆರೋಪದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಬಾಂಬೆ ಹೈಕೋರ್ಟ್​ ಆದೇಶಿಸಿದೆ. 15 ದಿನಗಳೊಳಗೆ ಪ್ರಾರ್ಥಮಿಕ ತನಿಖೆ ನಡೆಸಬೇಕೆಂದು ತಿಳಿಸಲಾಗಿದೆ. (ಏಜೆನ್ಸೀಸ್​)