ಮುಂಬೈ: ಕೋವಿಡ್ 19 ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್ ಅಗತ್ಯವಸ್ತುವಾಗಿರುವ ಕಾರಣ, ಅದರ ದರ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಮಾಸ್ಕ್ನ ಗುಣಮಟ್ಟ ಮತ್ತು ಮಾದರಿಗೆ ಅನುಗುಣವಾಗಿ ಗರಿಷ್ಠ ಮಾರಾಟ ದರವನ್ನು ಅದು ನಿಗದಿಪಡಿಸಿದೆ.
ಇದರಂತೆ, ಎರಡು ಪದರಗಳಿರುವ ಮಾಸ್ಕ್ ದರವನ್ನು 3 ರೂಪಾಯಿ, ಮೂರು ಪದರದ ಮಾಸ್ಕ್ಗಳ ದರವನ್ನು 4 ರೂಪಾಯಿ ಮತ್ತು ಎನ್-95 ಮಾಸ್ಕ್ ದರವನ್ನು 19 ರೂಪಾಯಿಗೆ ಇಳಿಕೆಯಾಗಿದೆ. ಮಾಸ್ಕ್ಗಳ ದರದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ನೀಡಿರುವ ವರದಿ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾಸ್ಕ್ ದರ ಶೇ. 437- ಶೇ. 575 ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್ ದರವನ್ನು ಪರಿಷ್ಕರಿಸಿದೆ.
ಅಲ್ಲದೆ, ಎಲ್ಲ ಮಾಸ್ಕ್ ಮೇಲೆ ಅದರ ಗುಣಮಟ್ಟ ಮತ್ತು ಎಂಆರ್ಪಿ ಮುದ್ರಣ ಕಡ್ಡಾಯವೆಂದು ತಿಳಿಸಲಾಗಿದೆ. ಕರೊನಾ ಸೋಂಕನ್ನು ತಡೆಗಟ್ಟಲು ಮಾಸ್ಕ್ ಅತ್ಯವಶ್ಯಕ. ಕಡಿಮೆ ದರದಲ್ಲಿ ಮಾಸ್ಕ್ ಜನರಿಗೆ ಸಿಗಬೇಕೆಂದು ಸಮಿತಿ ರಚಿಸಲಾಗಿತ್ತು ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ. (ಏಜೆನ್ಸೀಸ್)