ಮುಂಬೈ: ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಮತ್ತು ಡಿಸಿಎಂ ಹುದ್ದೆಯಿಂದ ವಜಾಗೊಳಿಸಿರುವ ಕಾಂಗ್ರೆಸ್, ಅವರಿಗೆ ಬೆಂಬಲ ನೀಡಿದ್ದ ಇಬ್ಬರು ಸಚಿವರನ್ನೂ ಹುದ್ದೆಯಿಂದ ಕಿತ್ತುಹಾಕಿದೆ. ಇದೀಗ ಸಚಿನ್ ಪೈಲಟ್ ಪರವಾಗಿ ಟ್ವೀಟ್ ಮಾಡಿದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸಂಜಯ್ ಜಾ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಸಂಜಯ್ ಜಾ ಅವರನ್ನು ಇತ್ತೀಚೆಗಷ್ಟೇ ಪಕ್ಷದ ವಕ್ತಾರನ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಪಕ್ಷದ ರಾಷ್ಟ್ರೀಯ ವಕ್ತಾರನ ಸ್ಥಾನ ಕಳೆದುಕೊಂಡ ನಂತರ ಜಾ ಅವರು ತಮ್ಮ ಟ್ವಿಟರ್ ಬಯೋನಲ್ಲಿ, ನಾನು ನನ್ನ ರಕ್ತದಿಂದ ಕಾಂಗ್ರೆಸ್ನವರು. ಆದರೆ, ಭಾರತಕ್ಕೆ ಪುನರುಜ್ಜೀವನಗೊಂಡ, ಎರಡನೇ ಸ್ವಾತಂತ್ರ್ಯ ಹೋರಾಟ ಗೆಲ್ಲಲು ಸಿದ್ಧವಾಗಿರುವ ಕಾಂಗ್ರೆಸ್ನ ಅಗತ್ಯವಿದೆ ಎಂದು ನಾನು ಬರೆದ ಕಾರಣಕ್ಕೆ ನನ್ನನ್ನು ರಾಷ್ಟ್ರೀಯ ವಕ್ತಾರನ ಹುದ್ದೆಯಿಂದ ಕೆಳಗೆ ಇಳಿಸಲಾಗಿದೆ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು ಸಚಿನ್ ಪೈಲಟ್-ಸಾರಾ ಮದುವೆ; ಅನೇಕರಿಗೆ ಗೊತ್ತಿಲ್ಲದ ಸಂಗತಿ ಇದು..
ಇದೀಗ ಸಚಿನ್ ಪೈಲಟ್ ಅವರನ್ನು ಎರಡೂ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಮತ್ತೆ ಟ್ವೀಟ್ ಮಾಡಿ ಕಾಂಗ್ರೆಸ್ನ್ನು ವ್ಯಂಗ್ಯ ಮಾಡಿದ್ದರು. ಸಚಿನ್ ಪೈಲಟ್ ಅವರು 2013ರಿಂದ 18ರವರೆಗೆ ಪಕ್ಷದ ಉದ್ಧಾರಕ್ಕಾಗಿ ತಮ್ಮ ಕಣ್ಣೀರು, ರಕ್ತ, ಬೆವರು, ಶ್ರಮ ನೀಡಿದ್ದಾರೆ. ಬರೀ 21 ಸೀಟ್ಗಳನ್ನು ಹೊಂದಿ ಕಳಪೆ ಮಟ್ಟಕ್ಕೆ ಇಳಿದಿದ್ದ ಕಾಂಗ್ರೆಸ್ 100 ಸ್ಥಾನಗಳನ್ನು ಗೆದ್ದಿದ್ದು ಸಚಿನ್ ಪೈಲಟ್ ಅವರಿಂದ. ಅದಕ್ಕೆ ಪ್ರತಿಫಲವಾಗಿ ನಾವು ಅವರಿಗೀಗ ಬೋನಸ್ ಕೊಡುತ್ತಿದ್ದೇವೆ. ನಾವು ತುಂಬ ಪಾರದರ್ಶಕವಾಗಿದ್ದೇವೆ..ಸಚಿನ್ ಪೈಲಟ್ ಅವರ ಕೆಲಸಕ್ಕೆ ಯೋಗ್ಯವಾದ ಬಹುಮಾನ ನೀಡಿದ್ದೇವೆ ಎಂದು ತೀರ ವ್ಯಂಗ್ಯವಾಗಿ ಬರೆದಿದ್ದರು.
ಅದಾದ ಕೆಲವೇ ಹೊತ್ತಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸಂಜಯ್ ಜಾ ಅವರನ್ನು ವಜಾ ಗೊಳಿಸಿ ಆದೇಶ ಹೊರಡಿಸಿದೆ. (ಏಜೆನ್ಸೀಸ್)