ನ್ಯೂಸ್

ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ; 8 ಮಂದಿ ಸಾವು..7 ಜನರಿಗೆ ಗಂಭಿರ ಗಾಯ | Maharashtra

ಮುಂಬೈ: ಮಹಾರಾಷ್ಟ್ರದ(Maharashtra) ಭಂಡಾರಾ ಜಿಲ್ಲೆಯ ಜವಾಹರ್​​ನಗರ ಪ್ರದೇಶದಲ್ಲಿ ಶುಕ್ರವಾರ(ಜನವರಿ 24) ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಸೇರಿದಂತೆ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.

ಸ್ಫೋಟದಿಂದಾಗಿ ಕಾರ್ಖಾನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ ಮತ್ತು ಅವಶೇಷಗಳನ್ನು ತೆರವುಗೊಳಿಸಲು ತಿಳಿಸಲಾಗಿದೆ. ಸ್ಫೋಟವನ್ನು ದುರದೃಷ್ಟಕರ ಘಟನೆ ಎಂದು ಕರೆದ ಕೇಂದ್ರ ಸಚಿವ ನಿತಿನ್ ಗಡ್ಕರಿ 8 ಮಂದಿ ಮೃತಪಟ್ಟಿರುವುದನ್ನು ಮತ್ತು 7 ಜನರಿಗೆ ಗಾಯವಾಗಿರುವುದನ್ನು ಖಚಿತಪಡಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿನ ಸ್ಫೋಟದಿಂದಾಗಿ ಘಟಕದ ಮೇಲ್ಛಾವಣಿ ಕುಸಿದು ಹಲವು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಘಟನೆಯ ಬಗ್ಗೆ ತಿಳಿದು ತುಂಬಾ ದುಃಖವಾಯಿತು. ಸ್ಥಳದಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಸಂತ್ರಸ್ತರಿಗೆ ನೆರವು ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬದುಕುಳಿದವರನ್ನು ಹುಡುಕಲು ರಕ್ಷಣಾ ಮತ್ತು ವೈದ್ಯಕೀಯ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದಾರೆ.

ಇದಕ್ಕೂ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕೋಲ್ಟೆ ಅವರು ಆರ್ಡಿನೆನ್ಸ್ ಸಂಕೀರ್ಣದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಹೇಳಿದರು. ಜವಾಹರ್​ ನಗರ ಪ್ರದೇಶದಲ್ಲಿರುವ ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸಮಯದಲ್ಲಿ 'ಎಲ್‌ಟಿಪಿ ವಿಭಾಗದಲ್ಲಿ' 14-15 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಕಳುಹಿಸಲಾಗಿದೆ. ಮೇಲ್ಛಾವಣಿ ಕುಸಿದಿದ್ದು, ಜೆಸಿಬಿ ಸಹಾಯದಿಂದ ತೆಗೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾನು ಕೆಲಸಕ್ಕೆ ಹೋಗುತ್ತಿದ್ದೆ, ಬೆಂಕಿ ಮತ್ತು ಹೊಗೆ ಹೊರಬರುವುದನ್ನು ನೋಡಿದೆ. ನಾನು ತುಂಬಾ ಜೋರಾಗಿ ಕೂಗುತ್ತಿದ್ದುದ್ದನ್ನು ಕೇಳಿದೆ. ಅವಶೇಷಗಳು ಗಾಳಿಯಲ್ಲಿ ಹಾರುತ್ತಿರುವುದನ್ನು ನೋಡಿದೆ. ಒಂದು ತುಂಡು ನನ್ನ ಹತ್ತಿರ ಬಿದ್ದಿತು, ನಾನು ಅಲ್ಲಿಂದ ಓಡಿಹೋದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​​)