ನ್ಯೂಸ್

Bihar Election | ಬಿಹಾರ ಚುನಾವಣಾ ಕಣಕ್ಕೆ ಖರ್ಗೆ, ರಾಹುಲ್​, ಪ್ರಿಯಾಂಕಾ ಲಗ್ಗೆ..

Patna: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ದಿನಾಂಕ ಸಮೀಪಿಸುತ್ತಿದ್ದು, ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂದು ಪಣ ತೊಟ್ಟಿರುವ ಇಂಡಿಯಾ ಕೂಟದ ಪ್ರಮುಖ ನಾಯಕರುಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನಿತರ ಹಿರಿಯ ಕಾಂಗ್ರೆಸ್ ನಾಯಕರು ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ ಎಂದು ವರದಿಯಾಗಿದೆ.

ರಾಹುಲ್ ಗಾಂಧಿ ಪ್ರವಾಸ, ಪ್ರಚಾರ..

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ತಿಂಗಳು ಕೈಗೊಂಡಿದ್ದ ಮತದಾರರ ಅಧಿಕಾರ ಯಾತ್ರೆಯ ಬಳಿಕ ಬಿಹಾರಕ್ಕೆ ಮತ್ತೆ ಮರಳುತ್ತಿದ್ದು. ಅಕ್ಟೋಬರ್ 29 ರಿಂದ ನವೆಂಬರ್ 7 ರವರೆಗೆ ಸುಮಾರು 12 ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ, ಒಗ್ಗಟ್ಟಿನ ಸೂತ್ರವಾಗಿ ಅವರೊಂದಿಗೆ ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೆಜ್ಜೆ ಹಾಕಲಿದ್ದಾರೆ.

ಅಕ್ಟೋಬರ್ 29 ಬುಧವಾರ, ರಾಹುಲ್ ಗಾಂಧಿ ಸಕ್ರಾದಲ್ಲಿ (ಮುಜಫರ್ ಪುರ್ ಜಿಲ್ಲೆ) ತೇಜಸ್ವಿ ಯಾದವ್​​ರೊಂದಿಗೆ ಜಂಟಿ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುವ ಮೂಲಕ ತಮ್ಮ ಪ್ರಚಾರ ಕಾರ್ಯವನ್ನು ಪ್ರಾರಂಭಿಸಲಿದ್ದಾರೆ. ಇಂಡಿಯಾ ಬಣದಲ್ಲಿ ಆಂತರಿಕ ಸಂಘರ್ಷಗಳಿದ್ದರೂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಎಲ್ಲವೂ ಚೆನ್ನಾಗಿದೆ ಎಂಬ ಸಂದೇಶವನ್ನು ಬಲಪಡಿಸಲು ರಾಹುಲ್ ಗಾಂಧಿ ದರ್ಭಂಗಾದಲ್ಲಿ ಆರ್‌ಜೆಡಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

ಪ್ರಿಯಾಂಕಾ ಗಾಂಧಿ....

ವಯನಾಡ್​​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಬೇಗುಸರಾಯ್‌ನ ಬಚ್ವಾರಾ ಕ್ಷೇತ್ರದಲ್ಲಿ ತಮ್ಮ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ, ಅಲ್ಲಿ ಬಿಹಾರ ಯುವ ಕಾಂಗ್ರೆಸ್ ಅಧ್ಯಕ್ಷ ಗರೀಬ್ ದಾಸ್ ಅವರು ಸಿಪಿಐನ ಅವದೇಶ್ ರಾಯ್ ಅವರನ್ನು ಎದುರಿಸುತ್ತಾರೆ. ಮೈತ್ರಿ ಮಾತುಕತೆಯ ಸಂದರ್ಭದಲ್ಲಿ ಈ ಕ್ಷೇತ್ರ ದೊಡ್ಡ ತಲೆನೋವಾಗಿತ್ತು, ಫ್ರೆಂಡ್ಲಿ ಫೈಟ್​ ಇರುವಲ್ಲಿಯೂ ಸಹ ಪ್ರಿಯಾಂಕಾ ಗಾಂಧಿ ಉಪಸ್ಥಿತಿ ಮತದಾರರ ವಿಶ್ವಾಸವನ್ನು ಗಳಿಸುವ ತಂತ್ರವಾಗಿದೆ.

ಪ್ರಿಯಾಂಕಾ ಗಾಂಧಿ, ಬಿಹಾರದಾದ್ಯಂತ ಮಹಿಳಾ ಮತದಾರರನ್ನು ಸೆಳೆಯಲು ಪ್ರಮುಖ ಮುಖವಾಗಿದ್ದು, ನವೆಂಬರ್ 1 ರಿಂದ ನವೆಂಬರ್ 8 ರವರೆಗೆ ಬೇಗುಸರಾಯ್, ಬೆಲ್ದೌರ್, ಖಗಾರಿಯಾ, ಲಖಿಸರಾಯ್, ಬಾರ್ಬಿಘಾ, ರೋಸೆರಾ, ಗೋವಿಂದಗಂಜ್, ಚನ್ಪಟ್ಟಿಯಾ, ಕಡ್ವಾ ಮತ್ತು ಕಸ್ಬಾ ಮುಂತಾದ ಕ್ಷೇತ್ರಗಳಲ್ಲಿ ಸುಮಾರು ಎಂಟು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ..

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೋಪಾಲ್‌ಗಂಜ್, ಅಮರ್‌ಪುರದಂತಹ ಪ್ರಮುಖ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದ್ದು, ಇತ್ತೀಚಿನ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ಖರ್ಗೆ ಪ್ರಚಾರವು ಬಿಹಾರದ ಚುನಾವಣೆಗಳಿಗೆ ಕಾಂಗ್ರೆಸ್ ನೀಡುತ್ತಿರುವ ಉನ್ನತ ಮಟ್ಟದ ಗಮನವನ್ನು ಬಲಪಡಿಸುವ ಮತ್ತು ದಲಿತ ಸಮುದಾಯದ ಸಂಪರ್ಕವನ್ನು ಕ್ರೋಢೀಕರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)