ನ್ಯೂಸ್

ಭಕ್ತಿ ಹುಡುಕುವ ಚಿಂತೆಯಲ್ಲಿ ತನ್ನನ್ನು ತಾನೇ ಮರೆತ ಮಹಾದೇವಿ

ಅಕ್ಕಮಹಾದೇವಿಯು ಹರನನ್ನು ಹಂಬಲಿಸುತ್ತಿದ್ದಾಳಷ್ಟೆ. ಆಕೆಯ ಹಂಬಲ ಅನಂತವಾದುದು. ಅವಳ ಹಂಬಲಕ್ಕೆ ಮಾರ್ಗವೊಂದು ಬೇಕಷ್ಟೆ. ಆದರೆ, ಆ ಮಾರ್ಗ ದುಸ್ತರವಾದುದೆಂದು ಅವಳು ಬಲ್ಲಳು. ಹರನು ಎಲ್ಲೆಲ್ಲೂ ಇರುವನೆಂದು ಅವಳು ಬಲ್ಲಳು. ಆದರೆ, ಅವನು ಕಣ್ಣಿಗೆ ಕಾಣಿಸಲೊಲ್ಲ. ಕಿವಿಗೆ ಕೇಳಿಸಲೊಲ್ಲ. ಸ್ಪರ್ಶಕ್ಕೆ ಸಿಗಲೊಲ್ಲ, ವಾಸನೆಗೆ ಗ್ರಹಿಸಲೊಲ್ಲ, ನಾಲಗೆಗೆ ರುಚಿಸಲೊಲ್ಲ! ಹರನನ್ನು ಇಂದ್ರಿಯಗಳ ಮೂಲಕ ಹಿಡಿಯಲು ಅಕ್ಕ ಪ್ರಯತ್ನಿಸುತ್ತಿದ್ದಾಳೆ. ಆದರೆ, ಅವನು ಅತೀಂದ್ರಿಯವೆಂಬುದು ಇನ್ನೂ ಅವಳ ಗ್ರಹಿಕೆಗೆ ಸಿಕ್ಕಿಲ್ಲ. ಅವನು ದಕ್ಕಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು. ಅವಳಿಗೆ ಕಲ್ಯಾಣಗೊತ್ತು, ಆ ಕಲ್ಯಾಣದಲ್ಲಿರುವ ಬಸವಣ್ಣನ ಹೆಸರನ್ನು ಕೇಳಿದ್ದಾಳೆ. ಅಕ್ಕ ಕಲ್ಯಾಣಕ್ಕೆ ಬಂದಳು. ಅಲ್ಲಿ ಶರಣ ಸಂದೋಹ ಪೂರಾ ನೆರೆದಿತ್ತು. ಅಣ್ಣ ಬಸವಣ್ಣನನ್ನು ನೆನೆದು ಬಂದರೆ; ಅಲ್ಲಮನನ್ನೇ ಕಂಡಳು. ಸಾಮಾನ್ಯ ಹೂಗಳಲ್ಲಿ ಸುಗಂಧ ಇರುವುದಿಲ್ಲ. ಆದರೆ, ಸಂಪಗೆ-ಮಲ್ಲಿಗೆಗಳಲ್ಲಿ ಪರಿಮಳ ತುಂಬಿರುತ್ತದೆ. ಅದರಂತೆ ಅಕ್ಕಮಹಾದೇವಿಯು ಅಲ್ಲಮ ಪ್ರಭುರಾಯನ ಬಳಿಗೆ ಸಂದಳು!

ಅಕ್ಕಮಹಾದೇವಿಯು ಪ್ರಭುವನ್ನು ಕಂಡಳಷ್ಟೆ. ಆಕೆಗೆ ಬಾಯಾರಿಕೆಗೊಂಡವನ ಮುಂದೆ ಅಮೃತದ ಪ್ರವಾಹವನ್ನು ಕಂಡಂತಾಯಿತು. ಪ್ರಭುದೇವನು ನಿರ್ವಿಕಾರಭಾವದಿಂದ ಕುಳಿತಿದ್ದಾನೆ. ಅವನ ಕಣ್ಣುಗಳಲ್ಲಿ ಪರಿಶುದ್ಧಜ್ಞಾನ ಮನಂಬುಗುತ್ತಿದೆ. ಅವನು ವೇದಜ್ಞನೂ ಹೌದು; ವೇದಾತೀತನೂ ಹೌದು. ಸಂಗನೂ ಹೌದು; ನಿಸ್ಸಂಗನೂ ಹೌದು. ಅವನು ಲೇಪನೂ ಹೌದು; ನಿರ್ಲೆಪನೂ ಹೌದು! ಭಾವುಕನೂ ಹೌದು; ನಿರ್ಭಾವುಕನೂ ಹೌದು. ಇಂಥವನನ್ನು ಕಂಡಕೂಡಲೇ ಮಹಾದೇವಿ ಹಾಡಿ ಹೊಗಳುತ್ತ ಆತನ ಪಾದಗಳಲ್ಲಿ ದೇಹವನ್ನು ಪೂರಾ ಚೆಲ್ಲಿದಳು; ಅಲ್ಲಿದ್ದ ಶಿವಗಣಂಗಳಿಗೆ ಕೈಮುಗಿದಳು. ಅಕ್ಕನ ಭಕ್ತಿಯ ನೆಲೆ ಅಲ್ಲಿ ಇರುವ ಶರಣರಿಗೆಲ್ಲಾ ಕಾಣಿಸಿತು. ಇದೇ ಸಂದರ್ಭದಲ್ಲಿ ಅಕ್ಕನ ವಚನವೊಂದು ಆಕೆಯ ಭಾವಭಕ್ತಿಯ ನೆಲೆಯನ್ನು ನಮಗೆ ಕಾಣಿಸುತ್ತದೆ:

ಅರಸಿ ತೊಳಲಿದರಿಲ್ಲ, ಹರಸಿ ಬಳಲಿದರಿಲ್ಲ

ಬಯಸಿ ಹೊಕ್ಕರಿಲ್ಲ, ತಪಸ್ಸು ಮಾಡಿದರಿಲ್ಲ

ಅದು ತನ್ನ ತಾನಹಕಾಲಕಲ್ಲದೆ ಸಾಧ್ಯವಾಗದು

ಶಿವನೊಲಿದಲ್ಲದೆ ಆಗದು

ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ

ನಾನು ಸಂಗನ ಬಸವಣ್ಣನ ಶ್ರೀಪಾದವ ಕಂಡು

ಬದುಕಿದೆನಯ್ಯಾ

ಅಕ್ಕಮಹಾದೇವಿಯು ಹಲವು ಕಾಲ ಹರನನ್ನು ಹಂಬಲಿಸಿದ್ದಾಳೆ. ಈ ಹಂಬಲವು ಭೌತಿಕವಾಗಿದ್ದರೆ; ಶಿವನೊಲುಮೆ ದಕ್ಕದು. ಇದು ಕಾಲಲಬ್ಧಿಯನ್ನು ಅವಲಂಬಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಅಕ್ಕನ ಈ ವಚನದಲ್ಲಿ ಬಹಳ ಮುಖ್ಯವಾದ ಮಾತೊಂದಿದೆ: ‘‘ತನ್ನ ತಾನಹಕಾಲಕಲ್ಲದೆ ಸಾಧ್ಯವಾಗದು’ ಯಾವುದೇ ಘಟನೆ ಸಂಭವಿಸಬೇಕಾದರೆ, ಕಾಲಕೂಡಿ ಬರಬೇಕು. ಎಲ್ಲವೂ ಕಾಲವಶ. ‘ಕಾಲಾಯ ತಸ್ಮೈ ನಮಃ’ ಎಂಬ ಮಾತುಂಟಷ್ಟೆ!

ಅಲ್ಲಮಪ್ರಭುವು ಶರಣೆ ಅಕ್ಕನನ್ನು ಕಂಡ. ಪಕ್ಕದಲ್ಲಿದ್ದ ಬಸವಣ್ಣನ ಕಡೆಗೆ ತಿರುಗಿ ‘ಈಕೆ ಭಕ್ತಿಯನ್ನು ಹುಡುಕುವ ಚಿಂತೆಯಲ್ಲಿ ತನ್ನನ್ನು ತಾನೆ ಮೈಮರೆತಿದ್ದಾಳೆ. ಇವಳು ನಾಚಿಕೆಯನ್ನು ತೊರೆದು ನಿಂತಿದ್ದಾಳೆ. ದೇಹದ ಮೇಲೆ ಯಾವ ಬಗೆಯ ಮೋಹವೂ ಈಕೆಗಿಲ್ಲ. ಸಾಮಾನ್ಯರಿಗೆ ಇರುವಂತೆ ಹಸಿವು-

ಬಾಯಾರಿಕೆಗಳು ಇಲ್ಲವಾಗಿವೆ. ದಿಗಂಬರೆಯಾಗಿ ಅತಿಶಯವಾಗಿ ಕಾಣಿಸುತ್ತಿದ್ದಾಳೆ’ ಎಂದು ನುಡಿದನು. ಆಕೆಯನ್ನು ಪ್ರತಿಯಾಗಿ ನಿಟ್ಟಿಸಿದನು. ಈ ಸಂದರ್ಭವನ್ನು ಅನುಭಾವಿಕವಿ ಚಾಮರಸನು ಕಟ್ಟಿಕೊಟ್ಟಿರುವುದು ಹೀಗೆ:

ಬತ್ತಲೆಯ ಬಗೆಗೊಂಡು ಹೆಂಗೂ/ಸಿತ್ತಲೇತಕೆ ಬಂದೆ ಕಾಮದ/ಕತ್ತಲೆಯ ಕಳೆಯದೆ ವೃಥಾ ವೈರಾಗ್ಯವೇಷದಲಿ/ಹತ್ತಿರಿದ್ದರೆ ನಮ್ಮ ಶರಣರು/ಚಿತ್ತದಲಿ ಕೆರಳುವರು ಕೇಳೆನು/ತೊತ್ತಿ ನೋಡಿದನಾಕೆಯಂತಸ್ಥವನು ಪ್ರಭುರಾಯ (ಪ್ರ.ಲೀಲೆ 17-7)

‘ನೀನು ಕಾಮದ ಕತ್ತಲೆಯನ್ನು ನಿವಾರಿಸಿಕೊಂಡಿಲ್ಲ. ಸುಮ್ಮನೆ ವಿರಾಗಿಣಿಯಾಗಿದ್ದೀಯೆ? ಹೆಂಗೂಸಾದ ನೀನು ದಿಗಂಬರೆಯಾಗಿ ಇಲ್ಲಿಗೇಕೆ ಬಂದೆ? ನೀನು ಸಮೀಪದಲ್ಲಿದ್ದರೆ, ನಮ್ಮ ಶರಣರು ಮನಸ್ಸಿನಲ್ಲಿಯೇ ಕೋಪಗೊಳುತ್ತಾರೆ’ ಹೀಗೆಂದು ಅವಳ ಒಳಮನಸ್ಸನ್ನು ಪ್ರಭುರಾಯ ಪರೀಕ್ಷಿಸಲು ನುಡಿದನು. ಇದೇ ಅಭಿಪ್ರಾಯ ಇರುವ ಅಲ್ಲಮನ ವಚನವೊಂದಿದೆ.

ಉನ್ಮದ ಯೌವನವನೊಳಕೊಂಡ ಸತಿ ನೀನು/ಇತ್ತಲೇಕೆ ಬಂದೆ ಹೇಳವ್ವ?/ಸತಿಯೆಂದರೆ ಮುನಿವರು ನಮ್ಮ ಶರಣರು/ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು/ಅಲ್ಲದಿರ್ದಡೆ ತೊಲಗು ತಾಯಿ/ಗುಹೇಶ್ವರ ಶರಣರಲ್ಲಿ ಲಿಂಗದ ಸಂಗಸುಖವ ಬಯಸುವರೆ/ ನಿನ್ನ ಪತಿಯ ಕುರುಹು ಹೇಳಾ ಎಲೆ ಅವ್ವಾ!.. ಅಲ್ಲಮನದು ನೇರ, ನಿಷ್ಠುರ ನುಡಿ. ಅವನು ಪ್ರತಿಯೊಬ್ಬ ಸಾಧಕರ ಮನಸ್ಸಿನ ಅಂತಸ್ಥವನ್ನು ಬಗೆದು ನೋಡುವವನೇ. ಕವಿ ಚಾಮರಸ ಕಾವ್ಯಾಭಿವ್ಯಕ್ತಿಯ ನೆಲೆಯಲ್ಲಿ ಅಕ್ಕನನ್ನು ಸಮೀಪಿಸಿದರೆ; ಅಲ್ಲಮನು ಶಿವಾನುಭವದ ಅಭಿವ್ಯಕ್ತಿ ನೆಲೆಯಲ್ಲಿ ಅಕ್ಕಳನ್ನು ಸಮೀಪಿಸುತ್ತಾನೆ. ಇದು ಪ್ರಶ್ನೋಪನಿಷತ್ತು ಹೇಗೋ ಹಾಗೆಯೇ ಉತ್ತರೋತ್ತರೋಪನಿಷತ್ತು ಹೌದು!