ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಬಂಧಿಸಲ್ಪಟ್ಟಿರುವ ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಕೇಸಿನ ತನಿಖಾಧಿಕಾರಿ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮೇಲೆ ಮತ್ತಷ್ಟು ವೈಯಕ್ತಿಕ ಆರೋಪಗಳು ಮೂಡಿಬಂದಿವೆ. ಈ ಕೇಸು ದುರುದ್ದೇಶಪೂರಿತ ಎಂದು ಆರೋಪಿಸುತ್ತಾ ಬಂದಿರುವ ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, ವಾಂಖೇಡೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ, ಹಣ ವಸೂಲಿ ಮಾಡುತ್ತಾರೆ ಎಂದು ಆರೋಪಿಸುತ್ತಿದ್ದಾರೆ. ಜೊತೆಗೆ, ವಾಂಖೇಡೆ ಕೆಲಸಕ್ಕೆ ಸೇರಲು ಸುಳ್ಳು ದಾಖಲಾತಿಗಳನ್ನು ಬಳಸಿದ್ದಾರೆ ಎಂದು ಆಪಾದಿಸಿದ್ದಾರೆ.
ಇಂದು ಸಮೀರ್ ವಾಂಖೇಡೆ ಅವರ ಮೊದಲ ಮದುವೆಯ ಚಿತ್ರವನ್ನು ಮತ್ತು 'ನಿಕಾಹ್ ನಾಮ'ವನ್ನು ಟ್ವಿಟರ್ ಮೂಲಕ ಜಾಹೀರು ಮಾಡಿರುವ ಮಲಿಕ್, ವಾಂಖೇಡೆ ಮುಸಲ್ಮಾನರಾಗಿದ್ದರೂ, ಪರಿಶಿಷ್ಟ ಜಾತಿಯ ಮೀಸಲಾತಿ ಆಧಾರದ ಮೇಲೆ ಐಆರ್ಎಸ್ ಸೇರಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಖಡಕ್ ಉತ್ತರ: ಇದಕ್ಕೆ ಪ್ರತಿಕ್ರಿಯಿಸಿರುವ ವಾಂಖೇಡೆ, ನಾನು ನನ್ನ ಮೊದಲನೇ ಪತ್ನಿ ಶಬಾನಾ ಖುರೈಶಿಯನ್ನು ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗಿದ್ದೆ. ನನ್ನ ತಾಯಿ ಮುಸಲ್ಮಾನರಾಗಿದ್ದರಿಂದ ಅವರ ಆಸೆಯನ್ನು ಪೂರೈಸಿದ್ದೆ. ಇದು ಅಪರಾಧವಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ. ನಿಕಾಹ್ ನಡೆದ ಕೆಲವೇ ದಿನಗಳಲ್ಲಿ ನಾವು ಸ್ಪೆಷಲ್ ಮ್ಯಾರೇಜಸ್ ಆ್ಯಕ್ಟ್ನ ಕೆಳಗೆ ನಮ್ಮ ಅಂತರಧರ್ಮೀಯ ಮದುವೆಯನ್ನು ರಿಜಿಸ್ಟರ್ ಮಾಡಿದ್ದೆವು ಅಂದಿದ್ದಾರೆ.
ಸಮೀರ್ ವಾಂಖೇಡೆ ತಂದೆ ಧ್ಯಾನ್ದೇವ್ ವಾಂಖೇಡೆ, 'ನಾನೊಬ್ಬ ದಲಿತ. ನನ್ನ ಮಗ ಮುಸಲ್ಮಾನನಾಗಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ್ದಾರೆ. ಸಮೀರ್ ಎರಡನೇ ಪತ್ನಿ ಕ್ರಾಂತಿ ರೆಡ್ಕರ್ ವಾಂಖೇಡೆ, ತಮ್ಮ ಪತಿಯ ಮೇಲೆ ವೈಯಕ್ತಿಕ ಆರೋಪಗಳನ್ನು ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನವಾಬ್ ಮಲಿಕ್ ತಮ್ಮ ಅಳಿಯನನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸಮೀರ್ರನ್ನು ತಮ್ಮ ಹುದ್ದೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಅಷ್ಟೆ' ಎಂದಿದ್ದಾರೆ. ಈ ವಿಚಾರದಲ್ಲಿ ತಾವು ಎಫ್ಐಆರ್ ದಾಖಲಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸಚಿವ ನವಾಬ್ ಮಲಿಕ್ ಅಳಿಯ ಸಮೀರ್ ಖಾನ್ರನ್ನು ಮತ್ತೊಂದು ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಅಧಿಕಾರಿಗಳು ಕಳೆದ ಜನವರಿಯಲ್ಲಿ ಬಂಧಿಸಿದ್ದರು ಎನ್ನಲಾಗಿದೆ. ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದ ನೈಜ ಚಿತ್ರಣವೇನು, ಅದರಲ್ಲಿ ಶಾರುಖ್ ಪುತ್ರ ಆರ್ಯನ್ರ ಪಾತ್ರ ಏನು ಎಂಬುದರ ತನಿಖೆಯಾಗುತ್ತಿರುವ ಸಂದರ್ಭದಲ್ಲಿ, ಎನ್ಸಿಬಿ ತನಿಖಾಧಿಕಾರಿ ಸಮೀರ್ ವಾಂಖೇಡೆ ಮೇಲೆ ವಿವಿಧ ಆರೋಪಗಳು ಕೇಳಿಬರುತ್ತಿರುವುದು ವಿಪರ್ಯಾಸ. (ಏಜೆನ್ಸೀಸ್)