ಬೆಳಗಾವಿ: ಗಡಿವಿವಾದ ಸುತ್ತಮುತ್ತ ರಾಜ್ಯದೊಂದಿಗೆ ಆಗಾಗ ಕಾಲು ಕೆರೆದು ಜಗಳಕ್ಕೆ ಬರುವ ಮಹಾರಾಷ್ಟ್ರ ಸರ್ಕಾರ ಈ ಬಾರಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಕರ್ನಾಟಕದ ವಿರುದ್ಧ ಹಲವು ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಕನ್ನಡಿಗರನ್ನು ಕೆರಳಿಸಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಬುಧವಾರ ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ನೇತೃತ್ವದಲ್ಲಿ ಕಾನೂನು ಪರಿಣತರು, ಎಂಇಎಸ್ ಮುಖಂಡರು, ಹೋರಾಟಗಾರರ ಸಭೆ ನಡೆಸಿದೆ. ರಾಜ್ಯ ಸರ್ಕಾರ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಕೆ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದು, ಗಡಿಭಾಗದಲ್ಲಿ ಅಪರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳ ನೇಮಕ ಸೇರಿ ಹಲವು ತೀರ್ವನಗಳನ್ನು ಈ ಸಭೆಯಲ್ಲಿ ತೆಗೆದುಕೊಂಡಿದೆ.
ಗಡಿವಿವಾದ ಸುಪ್ರೀಂಕೋರ್ಟ್ನಲ್ಲಿರುವ ಹಿನ್ನೆಲೆಯಲ್ಲಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶವನ್ನು ಸುಪ್ರೀಕೋರ್ಟ್ನಲ್ಲಿ ಪ್ರಶ್ನಿಸುವಂತೆ ನಾಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಒತ್ತಾಯಿಸಿದ್ದರು. ಅದಕ್ಕೆ ಮಹಾರಾಷ್ಟ್ರ ಸರ್ಕಾರ ಸ್ಪಂದಿಸಿದ್ದು, ಸಿದ್ಧತೆ ಮಾಡಿಕೊಳ್ಳುವಂತೆ ವಕೀಲರಿಗೆ ಸೂಚನೆ ನೀಡಿದೆ.
ಈಗಾಗಲೇ ಕರ್ನಾಟಕದೊಳಗಿನ ನಾಲ್ಕು ಜಿಲ್ಲೆಗಳ 865 ಹಳ್ಳಿ-ಪಟ್ಟಣಗಳ ಮರಾಠಿಗರ ಸಮಸ್ಯೆ ಆಲಿಸಲು, ಅವರಿಗೆ ಮಹಾರಾಷ್ಟ್ರ ಸರ್ಕಾರದ ಆರೋಗ್ಯ, ಶಿಕ್ಷಣ ಸೌಲಭ್ಯ ಕಲ್ಪಿಸಲು ಅಧಿಕಾರಿಯನ್ನು ನೇಮಕ ಮಾಡುವಂತೆ ಎಂಇಎಸ್ ಮುಖಂಡರು ಮಾಡಿದ್ದ ಮನವಿಗೆ ಸ್ಪಂದಿಸಿರುವ ಮಹಾರಾಷ್ಟ್ರ ಸರ್ಕಾರ, ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಮರಾಠಿಗರ ಸಮಸ್ಯೆ ಆಲಿಸಲು ಅಪರ ಜಿಲ್ಲಾಧಿಕಾರಿ ದರ್ಜೆ ಅಧಿಕಾರಿ ನೇಮಕ ಮಾಡಿದೆ. ಅಲ್ಲದೆ, ಗಡಿಭಾಗದಲ್ಲಿನ 865 ಹಳ್ಳಿಗಳಲ್ಲಿ ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ ವಿಸ್ತರಿಸಲು ನಿರ್ದೇಶನ ನೀಡಿದೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.
ಎಂಇಎಸ್ ನಿಷೇಧಿಸಲು ಆಗ್ರಹ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆ, ರಾಜಕೀಯ ಅಸ್ತಿತ್ವಕ್ಕಾಗಿ ಬೆಳಗಾವಿ ಮಹಾನಗರ ಸೇರಿ ಗಡಿ ಭಾಗದಲ್ಲಿರುವ ಮುಗ್ಧ ಮರಾಠಿ ಭಾಷಿಕರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗಡಿಯಲ್ಲಿ ನಿರಂತರವಾಗಿ ನಾಡವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಎಂಇಎಸ್ ಕೂಡಲೇ ನಿಷೇಧಿಸಬೇಕು. ಜತೆಗೆ ಸಮಿತಿಯ ಮುಖಂಡರ ಮೇಲೆ ನಾಡದ್ರೋಹಿ ಕೇಸ್ ದಾಖಲಿಸಬೇಕು. ಗಡಿಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಕೃತ್ಯಗಳಲ್ಲಿ ಎಂಇಎಸ್ ತೊಡಗಿಸಿಕೊಂಡಿದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿಲ್ಲ ಗಡಿ ಉಸ್ತುವಾರಿ ಸಚಿವ: ಮಹಾರಾಷ್ಟ್ರ ಸರ್ಕಾರ ಪದೇಪದೆ ಕ್ಯಾತೆ ತೆಗೆಯುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಎಚ್.ಕೆ. ಪಾಟೀಲ ಅವರಿಗೆ ಗಡಿ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಿದ್ದರು. ಮಹಾರಾಷ್ಟ್ರದ ಅನಗತ್ಯ ಕ್ಯಾತೆ ಎದುರಿಸಲು ಅಗತ್ಯ ಕ್ರಮಗಳನ್ನು ಪಾಟೀಲ ಕೈಗೊಳ್ಳುತ್ತಿದ್ದರು. ಆ ನಂತರ ಮೂರು ಸರ್ಕಾರಗಳ ಅವಧಿಯಲ್ಲಿ ಗಡಿ ಉಸ್ತುವಾರಿಗೆ ಯಾವುದೇ ಸಚಿವರು ನೇಮಕವಾಗಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಎರಡನೇ ಅವಧಿಯ ಸರ್ಕಾರ ಬಂದು ಒಂಭತ್ತು ತಿಂಗಳಾದರೂ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಈ ವಿಚಾರದಲ್ಲಿ ಗಡಿಭಾಗದ ಕನ್ನಡ ಹೋರಾಟಗಾರರು ಪದೇಪದೆ ಒತ್ತಡ ತರುತ್ತಲೇ ಇದ್ದಾರೆ.
ನಮ್ಮ ಕಾನೂನು ಪ್ರಶ್ನಿಸಲು ಅವರಾರು?: ರಾಜ್ಯದಲ್ಲಿನ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕೆಂಬ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವ ಮಹಾರಾಷ್ಟ್ರದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಕಾನೂನು ನಮ್ಮ ರಾಜ್ಯದ ವ್ಯಾಪ್ತಿಯೊಳಗೆ ಇರುತ್ತದೆ. ನಾವೇನು ಮಹಾರಾಷ್ಟ್ರದ ನಾಮಫಲಕಗಳಲ್ಲಿ ಕನ್ನಡ ಮಾಡುತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಹಾರಾಷ್ಟ್ರಕ್ಕೆ ತಿರುಗೇಟು ನೀಡಿದ್ದಾರೆ.
ಮಸೂದೆಗೆ ರಾಜ್ಯಪಾಲರಿಂದ ಅಂಕಿತವಾಗುತ್ತಿದ್ದಂತೆ ಅನುಷ್ಠಾನ ಪ್ರಾರಂಭಿಸುತ್ತೇವೆ. ಮಹಾರಾಷ್ಟ್ರ ಸುಪ್ರೀಂ ಕೋರ್ಟ್ಗೆ ಹೋದರೆ ಅಲ್ಲಿಯೂ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು. ರಾಜ್ಯದ ಒಂದಿಂಚು ಜಾಗವನ್ನೂ ಪಡೆಯಲು ಅವರಿಗೆ ಆಗುವುದಿಲ್ಲ. ನಮ್ಮ ಹಳ್ಳಿಗಳಲ್ಲಿ ಅವರ ಸರ್ಕಾರದ ಯಾವುದೇ ಯೋಜನೆ ಜಾರಿಗೆ ಅವಕಾಶ ಇಲ್ಲ. ಅವರ ನೆಲದಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ಆದರೆ, ನಮ್ಮ ಹಳ್ಳಿಗಳನ್ನು ಅಭಿವೃದ್ಧಿ ಮಾಡುವ ಬದ್ಧತೆ ಸರ್ಕಾರಕ್ಕೆ ಇದೆ ಎಂದು ಸ್ಪಷ್ಟಪಡಿಸಿದರು. ನಮ್ಮ ನೆಲದಲ್ಲಿ ಕನ್ನಡ ಉಳಿಸಲು, ಬೆಳೆಸಲು ನಾವು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕನ್ನಡಿಗರಾರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಮಾ.15ಕ್ಕೆ ಬೆಳಗಾವಿಯಲ್ಲಿ ಸಭೆ: ಮಹಾರಾಷ್ಟ್ರ ಸರ್ಕಾರ ರಾಜ್ಯದ ಗ್ರಾಮಗಳಲ್ಲಿ ಅವರ ಯೋಜನೆಗಳ ಜಾರಿಗೆ ಮುಂದಾಗಿರುವ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ನೆಲ ಮತ್ತು ಗಡಿ ಸಂರಕ್ಷಣಾ ಆಯೋಗ ಮಾ.15 ರಂದು ಬೆಳಗಾವಿಯಲ್ಲಿ ಸಭೆ ಕರೆದಿದೆ. ಮಹಾರಾಷ್ಟ್ರ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಬೆಳಗಾವಿಯ ಹೋರಾಟಗಾರರು, ಕನ್ನಡಪರ ಕಾರ್ಯಕರ್ತರು, ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಆ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ನ್ಯಾ.ಶಿವರಾಜ ಪಾಟೀಲ ವಿಜಯವಾಣಿಗೆ ತಿಳಿಸಿದರು.
ನಮ್ಮ ಶಾಸನಸಭೆ ನಮ್ಮ ಭಾಷೆ ಹಿತರಕ್ಷಣೆಗೆ ಶಾಸನಾತ್ಮಕ ಕ್ರಮ ಕೈಗೊಂಡಿದೆ. ಅದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಸುಪ್ರೀಂಕೋರ್ಟ್ ಮಹಾರಾಷ್ಟ್ರದ ನಡೆಯನ್ನು ಪುರಸ್ಕರಿಸುವುದಿಲ್ಲವೆಂಬ ವಿಶ್ವಾಸವಿದೆ. ಮಹಾರಾಷ್ಟ್ರ ನಮ್ಮ ರಾಜ್ಯದೊಳಗೆ ಅವರ ಅಧಿಕಾರಿಗಳನ್ನು ನೇಮಕ ಮಾಡಲು ಮುಂದಾದರೆ ಅದು ಅತ್ಯಂತ ಅಪ್ರಬುದ್ಧ ನಡೆಯಾಗುತ್ತದೆ. ಅಂತಹ ಯಾವುದೇ ಪ್ರಯತ್ನ ಮಾಡದಿರಲಿ.
| ಎಚ್.ಕೆ. ಪಾಟೀಲ ಕಾನೂನು ಸಚಿವ
ನಮ್ಮ ಕಾನೂನನ್ನು ಮಹಾರಾಷ್ಟ್ರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದರೆ ನಾವು ಯೋಗ್ಯ ರೀತಿಯಲ್ಲಿ ವಾದ ಮಂಡಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಅಡ್ವೋಕೇಟ್ ಜನರಲ್ ಹಾಗೂ ಸುಪ್ರೀಂಕೋರ್ಟ್ನಲ್ಲಿರುವ ಕಾನೂನು ಪರಿಣತರ ತಂಡಕ್ಕೆ ಸೂಕ್ತ ಸಲಹೆ ನೀಡಲಾಗುತ್ತದೆ.
| ನ್ಯಾ. ಶಿವರಾಜ ಪಾಟೀಲ ರಾಜ್ಯ ನೆಲ ಮತ್ತು ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ
ಕನ್ನಡ ನಾಮಫಲಕ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಫೆ.28 ರಿಂದಲೇ ನಾವು ಸಿದ್ಧತೆ ಆರಂಭಿಸುತ್ತೇವೆ. ರಾಜ್ಯಪಾಲರಿಂದ ಒಪ್ಪಿಗೆ ಸಿಗುತ್ತಿದ್ದಂತೆ ಅನುಷ್ಠಾನ ಮಾಡಲು ಸಿದ್ಧತೆ ಅಗತ್ಯವಿದೆ. ಗುರುವಾರ ಬಿಬಿಎಂಪಿ ಆಯುಕ್ತರ ಜತೆ ಈ ವಿಚಾರ ಚರ್ಚೆ ಮಾಡುತ್ತಿದ್ದೇನೆ.
| ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಗಡಿಭಾಗದಲ್ಲಿರುವ 865 ಗ್ರಾಮಗಳ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರದ ಆರೋಗ್ಯ, ಶಿಕ್ಷಣ ಸೇರಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಅಪರ ಜಿಲ್ಲಾಧಿಕಾರಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಈ ಭಾಗದಲ್ಲಿ ಮರಾಠಿಗರಿಗೆ ನೆರವಾಗಲು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಲಾಗಿದೆ. ಎರಡೂ ರಾಜ್ಯದ ಗಡಿ ಸಚಿವರು ಮೇಲಿಂದ ಮೇಲೆ ಸಭೆ ನಡೆಸಿ ಗಡಿ ವ್ಯಾಜ್ಯಗಳನ್ನು ಪರಿಹರಿಸುವ ಕೆಲಸ ಆಗಬೇಕಿದೆ.
| ಶಂಭುರಾಜ್ ದೇಸಾಯಿ, ಮಹಾರಾಷ್ಟ್ರ ಸರ್ಕಾರದ ಗಡಿ ಉಸ್ತುವಾರಿ ಸಚಿವ
ಮಹಾರಾಷ್ಟ್ರ ಸರ್ಕಾರ ಗಡಿ ಗ್ರಾಮಗಳಲ್ಲಿ ತನ್ನ ಯೋಜನೆಗಳನ್ನು ಜಾರಿಗೊಳಿಸಿ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ, ನಾಡವಿರೋಧಿ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಇದೀಗ ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ ಆದೇಶ ಪ್ರಶ್ನಿಸುವ ಮಟ್ಟಕ್ಕೆ ಹೋಗಿದ್ದು, ಇದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಕೂಡಲೇ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿ ಮಹಾರಾಷ್ಟ್ರ ಸರ್ಕಾರದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕು.
| ಅಶೋಕ ಚಂದರಗಿ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ