ನ್ಯೂಸ್

ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ

ಚೆನ್ನೈ: ಕೊಯಮತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ.

ಮಾರ್ಚ್ 18 ರಂದು ಕೊಯಮತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಅನುಮತಿ ನಿರಾಕರಿಸಿದ ಪೊಲೀಸ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ರಾಜ್ಯ ಘಟಕವು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಶುಕ್ರವಾರ ಬಿಜೆಪಿ ಮತ್ತು ರಾಜ್ಯ ಸರ್ಕಾರದ ವಾದ - ಪ್ರತಿವಾದ ಆಲಿಸಿದ ನಂತರ, ನ್ಯಾಯಮೂರ್ತಿ ಎನ್. ಆನಂದ ವೆಂಕಟೇಶ್ ಅವರಿದ್ದ ನ್ಯಾಯಪೀಠವು ಅನುಮತಿ ನೀಡಿತು.

ಭದ್ರತಾ ಕಾರಣ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ನಾಲ್ಕು ಕಿಮೀ ರೋಡ್ ಶೋಗೆ ಅನುಮತಿ ನಿರಾಕರಿಸಿದ್ದರು.

ರಾಜ್ಯವು ತನ್ನ ಪರೀಕ್ಷಾ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಮಾರ್ಚ್ 18 ಮತ್ತು 19 ರಂದು ಬೋರ್ಡ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಇಂತಹ ಸುದೀರ್ಘ ರೋಡ್‌ಶೋ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತಾವಿತ ನಾಲ್ಕು ಕಿಮೀ ರೋಡ್‌ಶೋಗೆ ಬಾಂಬ್ ಪತ್ತೆ ದಳ ಮತ್ತು ಡಿಫ್ಯೂಸಲ್ ಸ್ಕ್ವಾಡ್ ನಿಯೋಜನೆ ಅಗತ್ಯವಿರುತ್ತದೆ. ಇದರ ಜತೆಗೆ ನೈರ್ಮಲ್ಯೀಕರಣ ಸಹ ಕೈಗೊಳ್ಳಬೇಕಿರುತ್ತದೆ. ರಸ್ತೆಯ ಎರಡೂ ಬದಿ ಸೇರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುವುದು ಅಸಾಧ್ಯವಾಗುತ್ತದೆ. ಇದೇ ವಿಷಯವನ್ನು ಎಸ್‌ಪಿಜಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದಲ್ಲದೆ, ಜಿಲ್ಲೆಯು ಹೇಗೆ ಕೋಮು ಸೂಕ್ಷ್ಮತೆಯನ್ನು ಹೊಂದಿದೆ. ಇಲ್ಲಿತನಕ ಯಾವುದೇ ರಾಜಕೀಯ ನಾಯಕರಿಗೆ ರೋಡ್‌ಶೋ ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ಹೇಳಿ ಪೊಲೀಸರು ಅನುಮತಿಸಿರಲಿಲ್ಲ.