ಜಬಲ್ಪುರ: ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಲಂಚವಾಗಿ ಪಡೆದಿದ್ದ 5 ಸಾವಿರ ರೂ. ಹಣವನ್ನು ಕಂದಾಯ ಅಧಿಕಾರಿಯೊಬ್ಬ ನುಂಗಿ ನೀರು ಕುಡಿದಿರುವ ಘಟನೆ ಮಧ್ಯಪ್ರದೇಶದ ಕತ್ನಿಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ನಡೆದಿದೆ. ಅಧಿಕಾರಿ ಗಜೇಂದ್ರ ಸಿಂಗ್ ತನ್ನ ಖಾಸಗಿ ಕಚೇರಿಯಲ್ಲಿ 5 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ಸಂಗತಿ ಗೊತ್ತಾದ ಹಿನ್ನೆಲೆ ಮಧ್ಯಪ್ರದೇಶದ ಲೋಕಾಯುಕ್ತ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ (ಎಸ್ಪಿಇ) ರೆಡ್ಹ್ಯಾಂಡ್ ಆಗಿ ಹಿಡಿಯಲು ಬಲೆ ಬೀಸಿದ್ದರು. ಹಣ ಪಡೆಯುವಾಗ ದಾಳಿ ಮಾಡುತ್ತಿದ್ದಂತೆ ಹೆದರಿದ ಗಜೇಂದ್ರ ಸಿಂಗ್ ಲಂಚದ ಹಣವನ್ನು ನುಂಗಿದನು ಎಂದು ಎಸ್ಇಪಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.
ಅಧಿಕಾರಿ ಗಜೇಂದ್ರ ಸಿಂಗ್, ಜಮೀನು ವಿವಾದವನ್ನು ಬಗೆಹರಿಸಲು ಬರ್ಖೇದಾ ಗ್ರಾಮದ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಚಂದನ್ ಸಿಂಗ್ ಜಬಲ್‌ಪುರದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಲೋಕಾಯುಕ್ತರ ತಂಡ ಬಲೆ ಬೀಸಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ ಗಜೇಂದ್ರ ಸಿಂಗ್ ಲಂಚವಾಗಿ ಪಡೆದಿದ್ದ 500 ರೂಪಾಯಿಯ 9 ನೋಟುಗಳನ್ನು ನುಂಗಿದ್ದಾನೆ.
ಈ ವೇಳೆ 7 ಸದಸ್ಯರ ಲೋಕಾಯುಕ್ತ ತಂಡ ನೋಟುಗಳನ್ನು ತೆಗೆಯಲು ಪ್ರಯತ್ನಿಸಿತು. ಆದರೆ ಸಾಧ್ಯವಾಗದಿದ್ದಾಗ ಗಜೇಂದ್ರ ಸಿಂಗ್ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದರು. ನಂತರ ಹಣವನ್ನು ವಾಪಸ್ ತೆಗೆಯಲಾಯಿತು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಜೇಂದ್ರ ಸಿಂಗ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)