More

    ಚುರುಕಾದ ಗೃಹಲಕ್ಷ್ಮೀ ನೋಂದಣಿ  -92,102 ಸ್ತ್ರೀಯರಿಗೆ ಮಂಜೂರಾತಿ ಪತ್ರ -ಸೇವಾ ಕೇಂದ್ರಗಳಲ್ಲಿ ದಟ್ಟಣೆ

    ದಾವಣಗೆರೆ: ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಜಮೆ ಮಾಡುವ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಸೋಮವಾರ ನೋಂದಣಿ ಮಳೆಯಷ್ಟೇ ಬಿರುಸಾಗಿದೆ. ಸೋಮವಾರ ಮಧ್ಯಾಹ್ನದವರೆಗೆ ವೆಬ್ ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಮೂಲಕ 92,102 ಗೃಹಿಣಿಯರು ನೋಂದಣಿಯಾಗಿದ್ದಾರೆ.
    ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರ ಸೇರಿದಂತೆ ಜಿಲ್ಲೆಯ 410 ಕೇಂದ್ರಗಳಲ್ಲಿ ಜು.20ರಿಂದ ನೋಂದಣಿ ಕಾರ್ಯ ನಡೆಯುತ್ತಿದೆ. ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಎರಡರ ಮೂಲಕವೂ ಎಂಟ್ರಿ ಮಾಡಿ ಮಂಜೂರಾತಿ ಪತ್ರ ನೀಡಲಾಗುತ್ತಿದೆ.
    ಆರಂಭದಲ್ಲಿ ಮೊಬೈಲ್ ಸಂದೇಶ ಬಂದವರಿಗಷ್ಟೇ ಕೇಂದ್ರಗಳಿಗೆ ಬರುವ ಅವಕಾಶ ನೀಡಲಾಗಿತ್ತು. ಈಗ ಈ ಮಾನದಂಡ ಕೈಬಿಟ್ಟಿರುವುದರಿಂದ ಎಲ್ಲರೂ ನೇರವಾಗಿ ಕೇಂದ್ರಕ್ಕೆ ಬರುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಪಡಿತರ ಚೀಟಿ ಸಂಖ್ಯೆ ಮಾಹಿತಿ ನೀಡುತ್ತಿದ್ದಾರೆ. ಬೆಳಗ್ಗೆ 10ರಿಂದ ರಾತ್ರಿಯವರೆಗೆ ಜನರು ಇರುವವರೆಗೂ ನೋಂದಣಿ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
    ಆಯಾ ಕೇಂದ್ರಗಳಿಗೆ ನಿಯೋಜಿಸಿದ ನೋಡಲ್ ಅಧಿಕಾರಿಗಳೇ, ಅಲ್ಲಿಗೆ ಬರುವ ಜನಸಂದಣಿಯನ್ನು ನಿಯಂತ್ರಿಸುವ ಹೊಣೆ ವಹಿಸುತ್ತಿದ್ದಾರೆ. ಕೆಲವೆಡೆ ಇಬ್ಬರು ಆಪರೇಟರ್‌ಗಳಿದ್ದಾರೆ. ಮತ್ತೆ ಕೆಲವೆಡೆ ಕೇಂದ್ರಗಳಿಗೆ ನೋಂದಣಿ ಮಾಡಿಸಲು ಬಂದ ಕುಟುಂಬ ಸದಸ್ಯರ ನೆರವು ಪಡೆಯಲಾಗುತ್ತಿದೆ.
    ಸರ್ಕಾರದಿಂದಲೇ ಒಂದು ನೋಂದಣಿ ಮಾಡಿದರೆ ಆಯಾ ಕೇಂದ್ರಕ್ಕೆ 12 ರೂ. ಸಿಗಲಿದೆ. ಕೇಂದ್ರಗಳಲ್ಲಿ ಯಾವುದೇ ಸಿಬ್ಬಂದಿ ಸಾರ್ವಜನಿಕರಿಂದ ಹಣ ಸ್ವೀಕರಿಸುತ್ತಿರುವ ಬಗ್ಗೆ ದೂರು ಬಂದಿಲ್ಲ. ಹಾಗೆ ದೂರು ಬಂದಲ್ಲಿ ಕ್ರಮ ವಹಿಸಲಾಗುವುದು.
    ನಗರದ ಎರಡು ಖಾಸಗಿ ಸೈಬರ್ ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂಬುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
    ಪ್ರತಿ ಕೇಂದ್ರದಿಂದ ಕನಿಷ್ಠ 150ರಿಂದ ಗರಿಷ್ಠ 350 ಮಂದಿ ನೋಂದಣಿ ನಡೆಯುತ್ತಿದೆ. ಪ್ರಜಾಪ್ರತಿನಿಧಿಗಳ ಆಯ್ಕೆಯಾದಲ್ಲಿ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ. ನಿಯೋಜಿತ ಕೇಂದ್ರಗಳಲ್ಲಿ ಸಂದಣಿ ಹೀಗೇ ಮುಂದುವರಿದಲ್ಲಿ ಕೆಲವೆಡೆ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
    ಅಧಿಕಾರಿಗಳ ಭೇಟಿ: ನಗರಪಾಲಿಕೆ, ಚರ್ಚ್ ರಸ್ತೆ, ಗಾಂಧಿನಗರ, ನಿಜಲಿಂಗಪ್ಪ ಬಡಾವಣೆ ಸಮೀಪದ ಕರ್ನಾಟಕ ಒನ್ ಕೇಂದ್ರಗಳಿಗೆ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಸಿಡಿಪಿಒ ಬಿ.ಕುಮಾರ್ ಭೇಟಿ ನೀಡಿ ನೋಂದಣಿಯ ಸ್ಥಿತಿಗತಿ ಪರಿಶೀಲನೆ ನಡೆಸಿದರು.
    ನಿಮ್ಮ ಮನೆಗಳಿಗೆ ಸರ್ಕಾರದಿಂದಲೇ ನೇಮಕವಾಗಲಿರುವ ಪ್ರಜಾಪ್ರತಿನಿಧಿಗಳು ಬರಲಿದ್ದು, ಅಲ್ಲಿಯೇ ನೋಂದಣಿ ಮಾಡಿಸಬಹುದು. ಆದರೆ ನೀವು ಜನಸಂದಣಿಯಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಆಯುಕ್ತರು ಅಲ್ಲಿದ್ದ ಮಹಿಳೆಯರಿಗೆ ಹೇಳಿದರು.
    ‘ನಗರದ ಬಹುತೇಕ ಕಡೆಗಳಲ್ಲಿ ನೊಂದಣಿಗೆ ಹೆಚ್ಚಿನ ಹೆಣ್ಣುಮಕ್ಕಳು ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಹಳೆಯ ಭಾಗದಲ್ಲಿ ಕೇವಲ ಒಂದು ಕರ್ನಾಟಕ ಒನ್ ಕೇಂದ್ರವಿದೆ. ಹೆಚ್ಚು ನೋಂದಣಿ ದೃಷ್ಟಿಯಿಂದ ಅಲ್ಲಿ ಇನ್ನೆರಡು ಕೇಂದ್ರದ ಅಗತ್ಯವಿದೆ ಎಂದು ವಿಜಯವಾಣಿಗೆ ತಿಳಿಸಿದರು.
    ದಾವಣಗೆರೆ ನಗರ ದೊಡ್ಡದು. ಇಲ್ಲಿನ ಜನರ ಒತ್ತಡ ಕೂಡ ಹೆಚ್ಚಿದೆ. ಹೀಗಾಗಿ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ವಾಸಂತಿ ಉಪ್ಪಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts