ಆನೆ ಮೂರ್ತಿಯ ಕೆಳಗೆ ಸಿಲುಕಿದ ಭಕ್ತ 
ನ್ಯೂಸ್

Madhya Pradesh: ಹರಕೆ ತೀರಿಸಲು ಹೋಗಿ ಆನೆ ಕಾಲಲ್ಲಿ ಸಿಕ್ಕಿಕೊಂಡ ಭಕ್ತ! ಹೊರಬರಲಾಗದೆ ಪರದಾಟ

Madhya Pradesh: ಮಧ್ಯಪ್ರದೇಶದ ಅಮರಕಂಟಕ್‌ನ ಮಾ ನರ್ಮದಾ ದೇವಾಲಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹರಕೆ ತೀರಿಸಿದರೆ ಪಾಪ ಕಳೆಯುತ್ತೆ ಅನ್ನೋ ನಂಬಿಕೆಯಿಂದ ಕಲ್ಲಿನ ಆನೆ ಮೂರ್ತಿಯ ಕೆಳಗೆ ನುಸುಳಲು ಹೋದ ಭಕ್ತನೊಬ್ಬ ಅಲ್ಲೇ ಸಿಲುಕಿಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಲ್ಲಿನ ಆನೆ ಮೂರ್ತಿಯ ಕಾಲುಗಳ ನಡುವಿನಲ್ಲಿ ಸಿಲುಕಿಕೊಂಡು ಹೊರಬರಲು ಒದ್ದಾಡುತ್ತಿರುವುದು ಕಾಣಿಸುತ್ತದೆ. ಜಾಗ ತುಂಬಾ ಕಿರಿದಾಗಿದ್ದರಿಂದ ಮುಂದೆ ಹೋಗಲೂ ಆಗದೆ, ಹಿಂದಕ್ಕೆ ಬರಲೂ ಆಗದೆ ಪರದಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆತನಿಗೆ ಹೊರಬರಲು ಸಹಾಯ ಮಾಡಿದ್ದಾರೆ. ಕೊನೆಗೆ ಅವರ ಮಾರ್ಗದರ್ಶನದಂತೆ ಪ್ರಯತ್ನಿಸಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾನೆ..

ಆನೆ ಮೂರ್ತಿಯ ಕೆಳಗೆ ನುಸುಳುವುದೇಕೆ?

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಅಮರಕಂಟಕ್‌ನಲ್ಲಿರುವ ಮಾ ನರ್ಮದಾ ದೇವಾಲಯದಲ್ಲಿ ಒಂದು ಸ್ಥಳೀಯ ನಂಬಿಕೆ ಇದೆ. ದೇವಾಲಯದ ಆವರಣದಲ್ಲಿರುವ ಕಲ್ಲಿನ ಆನೆಯ ಕೆಳಗಿನಿಂದ ಹಾದುಹೋದರೆ ಪಾಪಗಳು ಕಳೆಯುತ್ತವೆ, ಕೆಟ್ಟ ಶಕ್ತಿಗಳು ದೂರವಾಗುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಇದೇ ನಂಬಿಕೆಯಿಂದ ಆನೆಯ ಕೆಳಗೆ ನುಸುಳಲು ಹೋದ ಭಕ್ತ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡಿದ್ದಾನೆ. ಅಂದಹಾಗೆ, ಇದೇ ದೇವಾಲಯದಲ್ಲಿ 2022ರ ಡಿಸೆಂಬರ್‌ನಲ್ಲೂ ಇಂತಹದ್ದೇ ಘಟನೆ ನಡೆದಿತ್ತು ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ನರ್ಮದಾ ದೇವಾಲಯದ ವಿಶೇಷತೆ ಏನು?

ಮಧ್ಯಪ್ರದೇಶದ ಅಮರಕಂಟಕ್‌ನಲ್ಲಿರುವ ಮಾ ನರ್ಮದಾ ದೇವಾಲಯವನ್ನು ನರ್ಮದಾ ಉದ್ಗಮ ದೇವಾಲಯ ಎಂದೂ ಕರೆಯುತ್ತಾರೆ. ನರ್ಮದಾ ನದಿ ಹುಟ್ಟುವ ಸ್ಥಳದಲ್ಲೇ ಈ ದೇವಾಲಯವಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ.

ಇದನ್ನು ಓದಿ: ಹೊಸ ಜಾಗದಲ್ಲಿ ಮಲಗಿದ್ರೆ ನಿದ್ದೆ ಹತ್ತಲ್ವಾ? ನಿಮ್ಮ ಮೆದುಳಿನ ಈ ವಿಚಿತ್ರ ಆಟದ ಬಗ್ಗೆ ಗೊತ್ತಾ? | Sleep Science

ಈ ದೇವಾಲಯಕ್ಕೆ 11ನೇ ಶತಮಾನದ ಇತಿಹಾಸವಿದೆ. ಕಲಚುರಿ ರಾಜವಂಶದ ಮಹಾರಾಜ ಕರ್ಣದೇವ ದೇವಾಲಯದ ನಿರ್ಮಾಣಕ್ಕೆ ಕಾರಣರಾಗಿದ್ದರು ಎನ್ನಲಾಗಿದೆ. ಬಳಿಕ ನಾಗಪುರದ ಭೋಂಸ್ಲೆ ಅರಸರು ಮತ್ತು ಇಂದೋರ್‌ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ದೇವಾಲಯದ ಅಭಿವೃದ್ಧಿ ಹಾಗೂ ನವೀಕರಣಕ್ಕೆ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ನರ್ಮದಾ ಜಯಂತಿ ಮತ್ತು ಮಹಾಶಿವರಾತ್ರಿ ಹಬ್ಬದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.