Sleep Science: ನೀವು ಎಲ್ಲಾದರೂ ಪ್ರವಾಸ ಹೋದಾಗ ಅಥವಾ ಬೇರೆಯವರ ಮನೆಯಲ್ಲಿ ಉಳಿದುಕೊಂಡಾಗ ಮೊದಲ ರಾತ್ರಿ ನಿದ್ದೆ ಸರಿಯಾಗಿ ಬರಲ್ವಾ? ಎಷ್ಟೇ ಪ್ರಯತ್ನ ಮಾಡಿದ್ರೂ ನಿದ್ದೆ ಹತ್ತೋದಿಲ್ಲ. ಸಣ್ಣಪುಟ್ಟ ಶಬ್ದ ಕೇಳಿದ್ರೂ ತಕ್ಷಣ ಎಚ್ಚರ ಆಗುತ್ತೆ. ಆದ್ರೆ ಅದೇ ಜಾಗದಲ್ಲಿ ಎರಡನೇ ದಿನದಿಂದ ಆರಾಮವಾಗಿ ನಿದ್ದೆ ಬರುತ್ತೆ. ಯಾಕೆ ಹೀಗೆ ಆಗುತ್ತೆ ಗೊತ್ತಾ? ಇದಕ್ಕೆ ವಿಜ್ಞಾನದಲ್ಲಿ 'ಫಸ್ಟ್ ನೈಟ್ ಎಫೆಕ್ಟ್' (First-Night Effect - FNE) ಅಂತ ಕರೆಯುತ್ತಾರೆ.
ಇದು ಕೇವಲ ನಿಮ್ಮ ಕಲ್ಪನೆಯಲ್ಲ. ಹೊಸ ಜಾಗದಲ್ಲಿ ಮಲಗುವಾಗ ನಮ್ಮ ಮೆದುಳು ತಕ್ಷಣವೇ ಸಂಪೂರ್ಣ ವಿಶ್ರಾಂತಿಗೆ ಹೋಗುವುದಿಲ್ಲ. ಅಪರಿಚಿತ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೂ ಸ್ವಲ್ಪ ಎಚ್ಚರಿಕೆಯಿಂದಲೇ ಇರುತ್ತದೆ. ಇದರ ಹಿಂದೆ ನಮ್ಮ ದೇಹದ ಸಹಜ ರಕ್ಷಣಾ ವ್ಯವಸ್ಥೆ ಕೆಲಸ ಮಾಡುತ್ತದೆ.
ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಹೊಸ ಜಾಗದಲ್ಲಿ ಮಲಗಿದಾಗ ಮೆದುಳಿನ ಎರಡೂ ಭಾಗಗಳು ಒಂದೇ ರೀತಿಯಲ್ಲಿ ನಿದ್ದೆ ಮಾಡುವುದಿಲ್ಲ. ಅದರಲ್ಲೂ ಎಡಭಾಗದ ಮೆದುಳು ಹೆಚ್ಚು ಜಾಗೃತವಾಗಿರುತ್ತದೆ.
ಇದನ್ನೇ ಒಂದು ರೀತಿಯಲ್ಲಿ 'ನೈಟ್ ವಾಚ್' ಅಂದರೆ ರಾತ್ರಿ ಕಾವಲು ವ್ಯವಸ್ಥೆ ಎಂದು ಕರೆಯಬಹುದು. ಹಿಂದೆ ಮನುಷ್ಯರು ಕಾಡು ಅಥವಾ ಗುಹೆಗಳಲ್ಲಿ ಮಲಗುತ್ತಿದ್ದಾಗ ಪ್ರಾಣಿಗಳು ಮತ್ತು ಇತರ ಅಪಾಯಗಳಿಂದ ರಕ್ಷಿಸಿಕೊಳ್ಳಲು ಇಂತಹ ಎಚ್ಚರಿಕೆಯ ವ್ಯವಸ್ಥೆ ಸಹಾಯ ಮಾಡುತ್ತಿತ್ತು ಎನ್ನುವುದು ಸಂಶೋಧಕರ ವಿವರಣೆ. ಡಾಲ್ಫಿನ್ಗಳು ಮತ್ತು ಕೆಲವು ಪಕ್ಷಿಗಳಲ್ಲೂ ಮೆದುಳಿನ ಒಂದು ಭಾಗ ಎಚ್ಚರವಾಗಿರುವಾಗ ಮತ್ತೊಂದು ಭಾಗ ನಿದ್ದೆ ಮಾಡುವ ವ್ಯವಸ್ಥೆ ಇದೆ.
ನಿಮ್ಮ ಮನೆಯಲ್ಲಿ ಫ್ಯಾನ್ ಅಥವಾ ವಾಹನಗಳ ಶಬ್ದಕ್ಕೆ ಅಭ್ಯಾಸವಾಗಿರುತ್ತದೆ. ಆದರೆ ಹೊಸ ಜಾಗದಲ್ಲಿ ಅದೇ ಶಬ್ದಗಳು ಅಪರಿಚಿತವಾಗಿ ಕೇಳಿಸುತ್ತವೆ. ಗಡಿಯಾರದ ಟಿಕ್ಟಿಕ್ ಸದ್ದು, ಫ್ಯಾನ್ ಶಬ್ದ, ಹೊರಗಡೆ ಓಡಾಡುವ ವಾಹನಗಳ ಸದ್ದು ಕೂಡ ನಿದ್ದೆಗೆ ಅಡ್ಡಿಯಾಗಬಹುದು. ಹೊಸ ಜಾಗದಲ್ಲಿ ಮೆದುಳು ಹೆಚ್ಚು ಎಚ್ಚರಿಕೆಯಿಂದ ಇರುವುದರಿಂದ ಇಂತಹ ಶಬ್ದಗಳಿಗೆ ಬೇಗ ಪ್ರತಿಕ್ರಿಯಿಸುತ್ತದೆ. ಹೀಗಾಗಿ ಗಾಢ ನಿದ್ದೆ ಬರದೆ ಪದೇ ಪದೇ ಎಚ್ಚರವಾಗುವ ಸಾಧ್ಯತೆ ಇರುತ್ತದೆ.
ನಮ್ಮ ಮನೆಯಲ್ಲಿ ಮಲಗುವ ಹಾಸಿಗೆ, ದಿಂಬು, ಕೋಣೆಯ ಉಷ್ಣತೆ ಮತ್ತು ಅಲ್ಲಿನ ವಾಸನೆಗೆ ದೇಹ ಹೊಂದಿಕೊಂಡಿರುತ್ತದೆ. ಆದರೆ ಹೋಟೆಲ್ ಅಥವಾ ಬೇರೆಯವರ ಮನೆಯಲ್ಲಿ ಇವೆಲ್ಲವೂ ಬದಲಾಗಿರುತ್ತವೆ. ಜತೆಗೆ, ಹೊಸ ಬೆಳಕು, ವಾಸನೆ ಮತ್ತು ವಾತಾವರಣದಿಂದ ಮೆದುಳಿನಲ್ಲಿರುವ 'ಅಮಿಗ್ಡಾಲಾ' ಭಾಗವೂ ಹೆಚ್ಚು ಸಕ್ರಿಯವಾಗಬಹುದು. ಇದು ಭಯ ಮತ್ತು ಅಪಾಯವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಹೊಸ ಜಾಗದಲ್ಲಿ ದೇಹಕ್ಕೆ ಆರಾಮವಾಗಿ ನಿದ್ದೆ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ.
ಫಸ್ಟ್ ನೈಟ್ ಎಫೆಕ್ಟ್ ಸಾಮಾನ್ಯವಾಗಿ ಮೊದಲ ರಾತ್ರಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ನಂತರ ಹೊಸ ಜಾಗಕ್ಕೆ ಹೊಂದಿಕೊಂಡಂತೆ ನಿದ್ದೆಯೂ ಸುಧಾರಿಸಬಹುದು. ಮೊದಲ ರಾತ್ರಿಯೇ ಚೆನ್ನಾಗಿ ನಿದ್ದೆ ಬರಲು ಈ ಕೆಲವು ಸರಳ ಸಲಹೆಗಳನ್ನು ಪಾಲಿಸಬಹುದು.
ಮನೆಯ ಪರಿಚಿತ ವಸ್ತು ತೆಗೆದುಕೊಂಡು ಹೋಗಿ: ಪ್ರಯಾಣದ ವೇಳೆ ನಿಮ್ಮ ಮನೆಯ ದಿಂಬಿನ ಕವರ್ ಅಥವಾ ಅಭ್ಯಾಸವಿರುವ ಹೊದಿಕೆಯನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.
ಮಲಗುವ ಸಮಯ ಬದಲಾಯಿಸಬೇಡಿ: ಪ್ರತಿದಿನ ಯಾವ ಸಮಯಕ್ಕೆ ಮಲಗುತ್ತೀರೋ, ಹೊಸ ಜಾಗದಲ್ಲೂ ಅದೇ ಸಮಯಕ್ಕೆ ಮಲಗಲು ಪ್ರಯತ್ನಿಸಿ.
ಶಬ್ದಗಳಿಂದ ದೂರವಿರಿ: ಸಣ್ಣಪುಟ್ಟ ಶಬ್ದಗಳು ನಿದ್ದೆಗೆ ಅಡ್ಡಿಯಾಗುತ್ತಿದ್ದರೆ ಇಯರ್ಪ್ಲಗ್ಸ್ ಬಳಸಬಹುದು.
ವೈಟ್ ನಾಯ್ಸ್ ಕೇಳಬಹುದು: ನಿಮಗೆ ಆರಾಮ ನೀಡುವ ಮೃದುವಾದ ವೈಟ್ ನಾಯ್ಸ್ ಅಥವಾ ಶಾಂತ ಸಂಗೀತ ಕೇಳುವುದರಿಂದ ನಿದ್ದೆಗೆ ಸಹಾಯವಾಗಬಹುದು.
ಇದನ್ನೂ ಓದಿ: ಮಾಟ-ಮಂತ್ರದ ಶಂಕೆ: 3 ವರ್ಷದ ಕಂದಮ್ಮನ ಹತ್ಯೆ, ಪಕ್ಕದ ಮನೆಯಲ್ಲೇ ಶವ ಪತ್ತೆ! | Girl Murder
ಹೀಗಾಗಿ ಹೊಸ ಜಾಗದಲ್ಲಿ ಮೊದಲ ರಾತ್ರಿ ನಿದ್ದೆ ಸರಿಯಾಗಿ ಬರದಿದ್ದರೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಇದು ಮೆದುಳು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಸಹಜ ಪ್ರಕ್ರಿಯೆಯಾಗಿರಬಹುದು.