ನ್ಯೂಸ್

ಕರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು, ಪರಿಸ್ಥಿತಿ ಕೈಮೀರುತ್ತಿದೆ...

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು, ಪರಿಸ್ಥಿತಿ ನಮ್ಮ ಕೈಮೀರುತ್ತಿದೆ ಎಂದ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಾರ್ವಜನಿಕರ ಸಹಕಾರದಿಂದಷ್ಟೇ ಸೋಂಕು ನಿಯಂತ್ರಿಸಲು ಸಾಧ್ಯ. ಇಲ್ಲವಾದಲ್ಲಿ ಯಾರಿಂದಲೂ ಕಾಪಾಡಲು ಆಗುವುದಿಲ್ಲ ಎನ್ನುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 9 ಮಂದಿ ಕರೊನಾಗೆ ಬಲಿಯಾಗಿದ್ದು, ಇನ್ನೂ 8 ಜನರ ಸ್ಥಿತಿ ಗಂಭೀರವಾಗಿದೆ. ಅವರು ಬದುಕುಳಿಯುವ ಭರವಸೆ ಕಾಣುತ್ತಿಲ್ಲ. ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಂಡರಷ್ಟೇ ನಾವು ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ. ಇಲ್ಲವಾದಲ್ಲಿ ಯಾರಿಂದಲೂ ಕಾಪಾಡಲಾಗುವುದಿಲ್ಲ ಎಂದು ಕೈಚೆಲ್ಲಿದರು. ಇದನ್ನೂ ಓದಿರಿ ಕೋವಿಡ್​ಗೆ ಔಷಧ ಇದೆ, ಆತಂಕ ಪಡಬೇಡಿ: ಡಿಸಿಎಂ ಅಶ್ವಥನಾರಾಯಣ

ಸೋಂಕು ಸಮುದಾಯಕ್ಕೆ ಹರಡಿರುವ ಹಿನ್ನೆಲೆಯಲ್ಲಿ ಹತೋಟಿಗೆ ತರಲು ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಕ್ವಾರಂಟೈನ್​ ಮುಗಿಸಿದವರು ಯುದ್ಧ ಗೆದ್ದು ಬಂದವರಂತೆ ಊರು ತುಂಬ ಓಡಾಡಲು ಆರಂಭಿಸುತ್ತಾರೆ. ಇದು ಬದಲಾಗಬೇಕು. ದಯಮಾಡಿ ಎಲ್ಲರೂ ಪರಸ್ಪರ ಅಂತರ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಮಾಧುಸ್ವಾಮಿ ಕೈಮುಗಿದು ಮನವಿ ಮಾಡಿದರು.

ಜನರು ಜಾಗೃತರಾಗಿ ಸಹಕಾರ ನೀಡಬೇಕು, ಭಯ ಬೇಡ. ಸೋಂಕು ಹೆಚ್ಚಾದರೂ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಜಿಲ್ಲಾಸ್ಪತ್ರೆ ಸೇರಿ ಸಾವಿರಕ್ಕೂ ಹೆಚ್ಚು ಬೆಡ್​ಗಳು ಸಿದ್ಧವಾಗಿದ್ದು, ವೆಂಟಿಲೇಟಿರ್​ಗಳು ಅಗತ್ಯಕ್ಕೆ ಅನುಗುಣವಾಗಿವೆ. ರೋಗ ಉಲ್ಬಣವಾದಾಗ ಆಸ್ಪತ್ರೆಗೆ ಬಂದರೆ ವೆಂಟಿಲೇಟರ್​ಗಳಿದ್ದರೂ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.

ಒಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಸೋಂಕು ಕಮ್ಯುನಿಟಿ ಸ್ಪ್ರೆಡ್​ ಆಗಿದೆ ಮತ್ತು ಪರಿಸ್ಥಿತಿ ಕೈ ಮೀರುತ್ತಿದೆ ಎಂದಿರುವುದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.