ನ್ಯೂಸ್

6 ಆಪರೇಷನ್​, 190 ಹೊಲಿಗೆ; ಶಿವರಾಜ್​ಕುಮಾರ್​​ ಸರ್ಜರಿ ಕುರಿತು ಆಘಾತಕಾರಿ ಅಂಶ ಬಿಚ್ಚಿಟ್ಟ Madhu Bangarappa

ಬೆಂಗಳೂರು: ಕ್ಯಾನ್ಸರ್​ನಿಂದ (Cancer) ಬಳಲುತ್ತಿರುವ ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​ಕುಮಾರ್​ (Shivarajkumar) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅಭಿಮಾನಿಗಳು ಹಾಗೂ ಕುಟುಂಬಸ್ಥರ ಪ್ರಾರ್ಥನೆಯ ಫಲವಾಗಿ ಅವರು ಕ್ಯಾನ್ಸರ್​ ಮುಕ್ತವಾಗಿದ್ದಾರೆ. ಜನವರಿ 26ರ ವೇಳೆಗೆ ಭಾರತಕ್ಕೆ ವಾಪಸ್​ ಆಗಲಿರುವ ನಟ ಶಿವರಾಜ್​ಕುಮಾರ್​ ಅವರನ್ನು ಎದುರು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ನಟ ಶಿವರಾಜ್​ಕುಮಾರ್​ ಅವರಿಗೆ ಶಸ್ತ್ರಚಿಕಿತ್ಸೆ ಹೇಗೆ ನಡೆಯಿತು ಎಂಬುದರ ಬಗ್ಗೆ ಅವರ ಸಂಬಂಧಿ, ಸಚಿವ ಮಧು ಬಂಗಾರಪ್ಪ (Madhu Bangarappa) ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ (Madhu Bangarappa), ಡಾ. ಮುರುಗೇಶ್​ ಅವರ ನೇತೃತ್ವದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಯಿತು. ಒಟ್ಟು 6 ಆಪರೇಷನ್​ ಮಾಡಲಾಗಿದ್ದು, ದೇಹದೊಳಗೆ 190 ಹೊಲಿಗೆ ಹಾಕಲಾಗಿದೆ. 5.5 ಗಂಟೆಯಲ್ಲಿ ಸರ್ಜರಿ ಮಾಡೋ ಪ್ಲಾನ್ ಇತ್ತು. 30 ನಿಮಿಷಕ್ಕೆ ಮುಂಚೆಯೇ ಆಪರೇಷನ್ ಮುಗಿಯಿತು. ಯಾವುದೇ ತೊಂದರೆ ಆಗಲಿಲ್ಲ. 4 ಗಂಟೆ ಒಳಗೆ ನಾವು ಹೋಗಿ ಮಾತನಾಡಿಸಿದೆವು.

ಸಚಿವ ಮಧು ಬಂಗಾರಪ್ಪ

ಎಲ್ಲರ ಹಾರೈಕೆ ಹಾಗೂ ನುರಿತ ವೈದ್ಯರಿಂದ ಎಲ್ಲವೂ ಚೆನ್ನಾಗಿ ಆಗಿದೆ.  ಎಲ್ಲರೂ ಶಿವಣ್ಣನವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಬ್ಲಾಡರ್​ ರಿಕನ್​ಸ್ಟ್ರಕ್ಷನ್ ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಿಡ್ನಿ ಫೇಲ್ಯೂರ್​ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹಾರ್ಟ್‌ ಅಲ್ಲಿ ಒಂದು ಸ್ಟಂಟ್ ಇದೆ.  ದಿನವೂ 4-5 ಕಿಲೋ ಮೀಟರ್​ ವಾಕ್​ ಮಾಡ್ತಿದ್ದಾರೆ. ಮನೆ ಎದುರಿಗೆ ಇರೋ ಕೆರೆ​​ ಸುತ್ತಲೂ ನಾಲ್ಕೈದು ರೌಂಡ್​ ಸುತ್ತುತ್ತಿದ್ದಾರೆ. ಖುದ್ದು ವೈದ್ಯರೇ ಹೇಳಿರೋ ಪ್ರಕಾರ ಫಿಟ್​ ಇದ್ದಾರಂತೆ. ಅಷ್ಟೇ ಅಲ್ಲ, ಜನವರಿ 25ನೇ ತಾರೀಖಿನಂದು ಶಿವಣ್ಣ ಬರಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಮಾಹಿತಿ ನೀಡಿದ್ದಾರೆ.