ಇಲ್ಲೋರ್ವ ಮಹಿಳೆ ಪುಟಾಣಿ ನಾಯಿಮರಿಯನ್ನು ಕ್ರೂರವಾಗಿ ಕೊಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗಿದೆ. ಹಾಗೇ ಆಕೆಯ ಕಟುಕ ಮನಸಿಗೆ ನೆಟ್ಟಿಗರು ಧಿಕ್ಕಾರ ಹೇಳಿದ್ದಾರೆ.
ಕಾರಿನ ಸೀಟಿನಲ್ಲಿ ಕುಳಿತ ಮಹಿಳೆ, ನಾಯಿಮರಿಯನ್ನು ಕಾಲಿನಿಂದ ಹೊಸಕಿ ಹತ್ಯೆ ಮಾಡಿದ್ದಾಳೆ. ಘಟನೆ ನಡೆದಿದ್ದು ಲಖನೌನಲ್ಲಿ ಎಂದು ಹೇಳಲಾಗಿದೆ.
ಮಹಿಳೆಯ ಚಪ್ಪಲಿಯಡಿ ಸಿಲುಕಿದ ನಾಯಿಮರಿ ನೋವಿನಿಂದ ಕೂಗುವುದನ್ನು ವಿಡಿಯೋದಲ್ಲಿ ನೋಡಬಹುದು. ನಾಯಿ ಮರಿಯನ್ನು ಕೊಂದ ಲಖನೌದ ಪೂಜಾ ದಿಲ್ಲಾನ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಪೂಜಾ ನಾಯಿ ಮರಿಯನ್ನು ಕೊಲ್ಲುವಾಗ ಆಕೆಯ ಪತಿ ರಾಜ್ ದಿಲ್ಲಾನ್ ಕೂಡ ಜತೆಯಲ್ಲಿದ್ದ.
ಪ್ರಾಣಿ ಹಿಂಸೆ ಆ್ಯಕ್ಟ್ನಡಿ ಪ್ರಾಣಿ ಹಕ್ಕು ಕಾರ್ಯಕರ್ತರಾದ ಕಮನಾ ಪಾಂಡೆ ಎಂಬುವರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಎಫ್ಐಆರ್ ಕೂಡ ದಾಖಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರಂತೂ ಬಾಯಿಗೆ ಬಂದಂತೆ ಬೈದಿದ್ದಾರೆ. ಆದರೆ ದಂಪತಿ ಬೇರೆಯದೇ ಕತೆ ಹೇಳುತ್ತಿದ್ದಾರೆ. ನಾವು ಪ್ರಾಣಿ ಪ್ರಿಯರು. ಯಾವುದೇ ನಾಯಿ ಮರಿಯನ್ನೂ ಕೊಂದಿಲ್ಲ. ನಮಗೂ, ಘಟನೆಗೂ ಸಂಬಂಧವಿಲ್ಲ. ನಾವೂ ಕೂಡ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)