ನ್ಯೂಸ್

ಗಾಯಕ್ಕೆ ತುತ್ತಾಗಿದ್ದ ಆಟಗಾರ ಈಗ ಸಂಪೂರ್ಣ ಫಿಟ್​; ಐಪಿಎಲ್ ಆರಂಭಕ್ಕೂ ಮುನ್ನ ಎಲ್​ಎಸ್​ಜಿಗೆ ಸಿಕ್ತು ಭರ್ಜರಿ ಸುದ್ದಿ

ಲಖನೌ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ತಂಡಗಳು ಈಗಾಗಲೇ ಅಭ್ಯಾಸವನ್ನು ಆರಂಭಿಸಿದ್ದು, ನೆಟ್ಸ್​ನಲ್ಲಿ ಬೆವರು ಹರಿಸುತ್ತಿವೆ. ಈ ಬಾರಿ ಕಪ್ ಗೆಲ್ಲಲೇಬೇಕೆಂಬ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿರುವ ಲಖನೌ ಸೂಪರ್​ಜೈಂಟ್ಸ್​ ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ ತಂಡಕ್ಕೆ ಸಿಹಿಸುದ್ದಿಯೊಂದು ಲಭಿಸಿದ್ದು, ಗಾಯಕ್ಕೆ ತುತ್ತಾಗಿದ್ದ ಸ್ಟಾರ್ ಆಟಗಾರ ಗುಣಮುಖರಾಗಿದ್ದು, ತಂಡ ಕೂಡಿಕೊಳ್ಳುವುದು ಪಕ್ಕಾ ಆಗಿದೆ.

2024ರ ವರ್ಷಾಂತ್ಯದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಿಷಭ್ ಪಂತ್​ ಸೇರಿದಂತೆ ಸ್ಫೋಟಕ ಆಟಗಾರರನ್ನು ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಲಖನೌ ಸೂಪರ್​ಜೈಂಟ್ಸ್​​ಗೆ ಶುಭ ಸುದ್ದಿಯೊಂದು ಲಭಿಸಿದೆ. ಅದೇನೆಂದರೆ ಆಸ್ಟ್ರೇಲಿಯಾ ತಂಡದ ಟಿ20 ನಾಯಕ ಮಿಚೆಲ್ ಮಾರ್ಷ್​ ಫಿಟ್​ ಆಗಿದ್ದು, ಐಪಿಎಲ್ ಆಡಲು ಸಜ್ಜಾಗಿದ್ದಾರೆ.

ಖಅಸಗಿ ಸುದ್ದಿ ಸಂಸ್ಥೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಇದೀಗ ಇಂಜುರಿಯಿಂದ ಚೇತರಿಸಿಕೊಂಡಿದ್ದು, ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಇಷ್ಟು ದಿನ ಅವರ ಅಲಭ್ಯತೆಯ ಬಗ್ಗೆ ಚಿಂತೆಗೀಡಾಗಿದ್ದ ಲಕ್ನೋ ತಂಡಕ್ಕೆ ಆನೆ ಬಲ ಬಂದಂತ್ತಾಗಿದೆ. ಆದರೆ ಮಾರ್ಷ್​ ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿ ಮಾಡಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಿಚಲ್ ಮಾರ್ಷ್ ಕಳೆದ ಕೆಲ ತಿಂಗಳಿನಿಂದ ಕ್ರಿಕೆಟ್​ನಿಂದ ದೂರು ಉಳಿದಿದ್ದರು. ಗಾಯದಿಂದ ಗುಣಮುಖರಾಗಿರುವ ಮಾರ್ಷ್​ ಸದ್ಯ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದು, ಮಾರ್ಚ್​ 18ರಂದು ಲಖನೌ ತಂಡವನ್ನು ಕೂಡಿಕೊಳ್ಳಲಿದ್ದಾರೆ.  ಐಪಿಎಲ್​ನಲ್ಲಿ 42 ಪಂದ್ಯಗಳನ್ನು ಆಡಿರುವ ಮಾರ್ಷ್​ 19.55 ಸರಾಸರಿಯಲ್ಲಿ 3 ಅರ್ಧಶತಕಗಳನ್ನು ಒಳಗೊಂಡಂತೆ 665 ರನ್ ಗಳಿಸಿದ್ದಾರೆ. ಕಳೆದ ಸೀಸನ್​ನಲ್ಲಿ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.