ನವದೆಹಲಿ: ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಒಂದರಲ್ಲಿ ಆರೋಪಿ ಮನೋರಂಜನ್ ಅಧಿವೇಶನದ ಪಾಸ್ಗಾಗಿ ಮೂರು ತಿಂಗಳುಗಳ ಕಾಲ ಸಂಸದರ ಕಚೇರಿ ಅಲೆದಾಡಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಆಪ್ತರೊಬ್ಬರು, ಹೊಸ ಸಂಸತ್ ಭವನ ವೀಕ್ಷಿಸುವ ಸಲುವಾಗಿ ಆರೋಪಿ ಪಾಸ್ ಪಡೆದಿದ್ದ. ಇದಲ್ಲದೆ ಮಹಿಳೆ ಸೇರಿದಂತೆ ಇನ್ನಿಬ್ಬರು ಪಾಸ್ ಪಡೆದಿದ್ದರು ಎಂದು ತಿಳಿಸಿದ್ದಾರೆ.
ಆರೋಪಿ ಮನೋರಂಜನ್ ಕಳೆದ ಮೂರು ತಿಂಗಳಿನಿಂದ ಸಂಸದರ ಕಚೇರಿಗೆ ಪಾಸ್ಗಾಗಿ ಅಲೆದಾಟ ನಡೆಸಿದ್ದ. ಇದಲ್ಲದೆ ಸಹ ಆರೋಪಿ ಸಾಗರ್ ಶರ್ಮಾನನ್ನು ತನ್ನ ಸ್ನೇಹಿತ ಎಂದು ಸಂಸದರ ಕಚೇರಿಗೆ ಪರಿಚಯಿಸಿದ್ದ. ನೂತನ ಸಂಸತ್ ಭವನ ನೋಡಲು ಪಾಸ್ ಬೇಕಾಗಿದೆ ಎಂದು ಹೇಳಿ ಆರೋಪಿಗಳು ಪಾಸ್ ಪಡೆದಿದ್ದರು.
ಬುಧವಾರ ಸಂಸದ ಪ್ರತಾಪ್ ಸಿಂಹ ಅವರ ಆದೇಶದ ಮೇರೆಗೆ ಮೂರು ಪಾಸ್ಗಳನ್ನು ನೀಡಲಾಗಿತ್ತು. ಈ ಪೈಕಿ ಓರ್ವ ಮಹಿಳೆ ಸಹ ಪಾಸ್ ಪಡೆದಿದ್ದರು. ಆದರೆ, ಕಾರಣಾಂತರಗಳಿಂದ ಅವರು ಕಲಾಪವನ್ನು ವೀಕ್ಷಿಸದೆ ಪಾಸ್ ಹಿಂತಿರುಗಿಸಿ ತೆರಳಿದ್ದಾರೆ. ಘಟನೆಗೂ ಮಹಿಳೆಗೂ ಯಾವುದೇ ಸಂಬಂಧವಿಲ್ಲ. ಆರೋಪಿ ಮನೋರಂಜನ್ ಕಳೆದ ಮೂರು ತಿಂಗಳಿನಿಂದ ಸಂಸದರ ಕಚೇರಿಗೆ ನಿರಂತರವಾಗಿ ಭೇಟಿ ನೀಡಿದ ಕಾರಣ ಅವರಿಗೆ ಪಾಸ್ ನೀಡಲಾಗಿತ್ತು.
ಸಾಮಾನ್ಯವಾಗಿ ತಮ್ಮ ಕ್ಷೇತ್ರದ ಜನರು ಕಲಾಪವನ್ನು ವೀಕ್ಷಿಸಲು ಪಾಸ್ ಕೇಳಿದಾಗ ಸಂಸದರು ನೀಡುತ್ತಾರೆ. ಅದೇ ರೀತಿ ಪ್ರತಾಪ್ ಸಿಂಹ ಅವರು ಪಾಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ರೀತಿಯ ದುರುದ್ದೇಶವಿಲ್ಲ ಎಂದು ಪ್ರತಾಪ್ ಸಿಂ ಆಪ್ತರೊಬ್ಬರು ಹೇಳಿದ್ದಾರೆ.