ನ್ಯೂಸ್

ಶ್ವಾನವನ್ನೇ ಭಕ್ಷಿಸುವ ಚೀನಾದಲ್ಲೊಂದು ಮನಕಲಕುವ ಘಟನೆ: ಎಲ್ಲರ ಪ್ರೀತಿ ಸಂಪಾದಿಸಿದ ನಾಯಿಯ ಹಿಂದಿದೆ ನೋವಿನ ಕತೆ

ಬೀಜಿಂಗ್​: ಚೀನಾದಲ್ಲಿನ ನಿಷ್ಠಾವಂತ ಶ್ವಾನವೊಂದು ವಿದಾಯ ಹೇಳದೇ ತನ್ನನ್ನು ತೊರೆದ ಮಾಲೀಕನಿಗಾಗಿ ಕಳೆದ ಮೂರು ವರ್ಷಗಳಿಂದ ಕಾಯುತ್ತಿರುವ ಮನಕಲುಕುವ ಘಟನೆ ಚೀನಾದಲ್ಲಿ ವರದಿಯಾಗಿದೆ.

ಸಾಕು ನಾಯಿಯ ಹೆಸರು ಹೈಝಿ. ಚೀನಾದ ಕ್ಸಿಯಾನ್ ನಗರದದಲ್ಲಿ ಮಾಲೀಕರೊಂದಿಗೆ ವಾಸವಿದ್ದ ವಸತಿ ಸಂಕೀರ್ಣದ ಮುಂದೆ ಹಗಲು ರಾತ್ರಿ ಕಾಯುತ್ತಾ ಕುಳಿತಿರುವ ಹೈಝಿ ಸ್ಟೋರಿ ರೋಚಕವಾಗಿದೆ.

ಶ್ವಾನವು ದಕ್ಷಿಣ ಕೊರಿಯಾ ಮೂಲದ ವ್ಯಕ್ತಿಗೆ ಸೇರಿದ್ದಾಗಿದ್ದು, 2017ರಲ್ಲಿ ಆತ ಶ್ವಾನವನ್ನು ಕ್ಸಿಯಾನ್​ ನಗರದ ವಸತಿ ಸಂಕೀರ್ಣದಲ್ಲೇ ಬಿಟ್ಟು ಕೊರಿಯಾಗೆ ತೆರಳಿದ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದರ ನಡುವೆ ಕಮ್ಯುನಿಟಿ ಅಧಿಕಾರಿಯೊಬ್ಬರು ಶ್ವಾನವನ್ನು ಬೀದಿ ನಾಯಿಯೆಂದು ಪರಿಗಣಿಸಿ ಹಿಡಿದುಕೊಂಡು ಹೋಗುವ ಎಚ್ಚರಿಕೆ ನೀಡಿದ್ದು, ನೆರೆಯವರಾದ ವಾಂಗ್​ ಹುಯಿಲಿ ಎಂಬಾಕೆ ಶ್ವಾನದ ಬೆನ್ನಿಗೆ ನಿಲ್ಲುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕೆಲವರು ಶ್ವಾನಕ್ಕೆ ಹೆದರಿ ಅಧಿಕಾರಿಗಳಿಗೆ ದೂರು ಸಹ ನೀಡಿದ್ದು, ಕಾಯುತ್ತಿರುವ ಜಾಗದಿಂದ ಶ್ವಾನವನ್ನು ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ.

ಆದರೆ, ವಸತಿ ಸಂಕೀರ್ಣದಲ್ಲಿರುವ ಅನೇಕರು ಶ್ವಾನದೆಡೆಗೆ ಕರುಣೆ ತೋರಿದ್ದಾರೆ. ತಮ್ಮ ಸಾಕು ನಾಯಿ ಎಂಬಂತೆ ನೋಡಿಕೊಳ್ಳುತ್ತಿದ್ದಾರೆ. ನಮ್ಮ ನಾಯಿಗಳಿಗೆ ಮಾತ್ರವಲ್ಲದೇ ಹೈಝಿಗೂ ಮಾಂಸ ಅಥವಾ ಇತರೆ ಆಹಾರಗಳನ್ನು ನೀಡುತ್ತಿದ್ದೇವೆ. ಹೈಝಿ ನಿಜಕ್ಕೂ ಪ್ರಾಮಾಣಿಕ ಶ್ವಾನ. ಎಲ್ಲಿಗೂ ಕದಲದೆ ಕಳೆದ ಮೂರು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದೆ. ಹೊಸ ಮಾಲೀಕರನ್ನು ಹುಡುಕಿಕೊಳ್ಳುವ ಪ್ರಯತ್ನವನ್ನೂ ಮಾಡದೇ, ಹಳೇ ಮಾಲೀಕ ಬರುವಿಕೆಯ ಭರವಸೆಯಲ್ಲೇ ಕಾಯುತ್ತಾ ಕುಳಿತಿದೆ. ಒಂದಲ್ಲ ಒಂದು ದಿನ ಮಾಲೀಕ ಮರಳಿ ಬರುವ ವಿಶ್ವಾಸ ಶ್ವಾನಕ್ಕಿದೆ ಎಂದು ವಾಂಗ್​ ತಿಳಿಸಿದ್ದಾರೆ.

ಇದರ ನಡುವೆ ಮಾನವೀಯತೆ ಮೆರೆದಿರುವ ಕಟ್ಟಡದ ನಿವಾಸಿಗಳು, ಹೈಝಿಗೆ ಬಿದಿರಿನಲ್ಲಿ ಸಣ್ಣ ಮನೆಯೊಂದು ನಿರ್ಮಿಸಿದ್ದಾರೆ. ಪ್ರತಿನಿತ್ಯ ಅದಕ್ಕೆ ಆಹಾರವನ್ನು ನೀಡುತ್ತಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆ ಹಾಗೂ ಸಂಜೆ 4 ಗಂಟೆಗೆ ಸರಿಯಾಗಿ ಕಟ್ಟಡದ ಮಧ್ಯ ಭಾಗದಲ್ಲಿರುವ ಪ್ರತಿಮೆ ಬಳಿ ಬರುವ ಶ್ವಾನ ಮಾಲೀಕನಿಗಾಗಿ ಕಾಯುತ್ತದೆ. ಜಾಣ, ಒಳ್ಳೆಯ ಹಾಗೂ ಸೂಕ್ಷ್ಮ ಸಂವೇದನೆಯುಳ್ಳ ಶ್ವಾನವೆಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂದಿಗೂ ಇತರೆ ಶ್ವಾನಗಳೊಟ್ಟಿಗೆ ಕಾದಾಟಕ್ಕೆ ಇಳಿಯದ ಹೈಝಿ, ಮಕ್ಕಳನ್ನು ಸಹ ಅಟ್ಟಾಡಿಸಿ ಕಚ್ಚುವುದಿಲ್ಲ. ಪ್ರಾಣಿ ಪ್ರಿಯರು ಕೂಡ ಹೈಝಿಯೊಂದಿಗೆ ಆಟವಾಡುತ್ತಾರೆ ಎಂದು ವಾಂಗ್​ ತಿಳಿಸಿದ್ದು, ಮೂರು ವರ್ಷಗಳಿಂದ ತನ್ನ ಮಾಲೀಕನ ಬರುವಿಕೆಗಾಗಿ ಕಾಯುತ್ತಿರುವ ನಿಷ್ಠಾವಂತ ಶ್ವಾನಕ್ಕೆ ತನ್ನ ಆಸೆ ಈಡೇರಲಿ ಎಂದು ಆಶಿಸೋಣ. (ಏಜೆನ್ಸೀಸ್​)