ನ್ಯೂಸ್

VIDEO| ಮದುವೆಯಾಗಲು ದೇವಸ್ಥಾನಕ್ಕೆ ಹೊರಟ ಪ್ರೇಮಿಗಳು ಮಾರ್ಗ ಮಧ್ಯೆಯೇ ಶವವಾದರು..!

ಹೈದರಾಬಾದ್​: ಕಳೆದ ಮಂಗಳವಾರ ನಡೆದಿದ್ದ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ತೆಲಂಗಾಣದಲ್ಲಿ ಚೋಟು ಉಪ್ಪಲ್​ ಸಿಗ್ನಲ್ ​ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬ್ರೆಕ್ ಫೇಲ್​ ಆಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು.

ಅಪಘಾತದ ವೇಳೆ ಬೈಕ್​ನಿಂದ ಪೆಟ್ರೋಲ್​ ಹೊರಬಿದ್ದ ಕಾರಣ ನಡುರಸ್ತೆಯಲ್ಲೇ ಬೈಕ್​ ಹೊತ್ತಿ ಉರಿದಿತ್ತು. ​ಸುಮಾರು ನಾಲ್ಕು ಬೈಕ್​​ಗಳಿಗೆ ಕಾರು ಡಿಕ್ಕಿ ಹೊಡೆದಿತ್ತು. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಇಬ್ಬರ ದಾರುಣ ಸಾವಿಗೀಡಾಗಿದ್ದರು.

ಮೃತ ಇಬ್ಬರು ಸಹ ಪ್ರೇಮಿಗಳು ಎಂಬುದೇ ಮನಕಲಕುವ ಸಂಗತಿ. ಚೋಟು ಉಪ್ಪಲ್ ಸಮೀಪದ ಟ್ಯಾಂಕ್​ ಬಂದ್​ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ಪ್ರೇಮಿಗಳು ತೆರಳುತ್ತಿದ್ದರು. ದುರಾದೃಷ್ಟವಶಾತ್​ ಜವರಾಯನ ಅಟ್ಟಹಾಸದಿಂದಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟರೆ, ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಅವರು ತೆರಳುತ್ತಿದ್ದ ಸ್ಕೂಟಿಯೂ ಸಹ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.

ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)