ಧರ್ಮಾವರಂ: ನಮ್ಮ ಜೊತೆಗಿರುವವರೇ ಬೆನ್ನಿಗೆ ಇರಿಯುವುದು ಜಾಸ್ತಿ ಎಂದು ತುಂಬಾ ಸಲ ಹಲವರು ಮಾತನಾಡಿರುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಲ್ಲಿ ವರದಿಯಾಗಿದೆ. ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ, ಆತನನ್ನು ಕೊಂದೇ ಹಾಕಿದ್ದಾಳೆ. ಪ್ರಿಯಕರನನ್ನು ಕೊಂದ ಆರೋಪದ ಮೇಲೆ 20 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಬಾಟಿ ಕರುಣಾ ತಾತಾಜಿ (23) ಕೊಲೆಯಾದ ಪ್ರಿಯಕರ. ಗಸಿಕುಟ್ಟಿ ಪಾವನಿ (20) ಕೊಲೆ ಆರೋಪಿ. ಇಬ್ಬರ ಪ್ರೀತಿಯ ಮಧ್ಯೆ ಇನ್ನೊಬ್ಬಳು ಬಂದಿದ್ದಾಳೆ ಎಂಬುದೇ ಈ ಕೊಲೆಗೆ ಕಾರಣ. ಪ್ರಿಯಕರ ಮತ್ತೊಬ್ಬಳನ್ನು ಇಷ್ಟಪಡುತ್ತಿದ್ದು, ಆಕೆಯಿಂದ ಆಗಾಗ ಖರ್ಚಿಗೆ ಹಣ ತೆಗೆದುಕೊಳ್ಳುತ್ತಿದ್ದುದನ್ನು ಹೇಳಿದ್ದಕ್ಕೆ ಸಿಟ್ಟಾದ ಪ್ರೇಯಸಿ ಪಾವನಿ ಈ ಕೃತ್ಯ ಎಸಗಿದ್ದಾಳೆ. ತಾತಾಜಿ ಸೇಲ್ಸ್ಮ್ಯಾನ್ ಆಗಿದ್ದು, ಆದರೆ ಈ ಕೋವಿಡ್ ಸಂದರ್ಭದಲ್ಲಿ ನಿರುದ್ಯೋಗಿಯಾಗಿದ್ದ.
ಸೋಮವಾರ ರಾತ್ರಿ ತಾತಾಜಿ ಮತ್ತು ಪಾವನಿ ಇಬ್ಬರೂ ಬೈಕ್ನಲ್ಲಿ ಮಲಕಪಲ್ಲಿ ಜಿಲ್ಲೆಯ ಕಪಾವರಂ ಎಂಬಲ್ಲಿಂದ 75 ಕಿ.ಮೀ. ದೂರದ ಭೀಮಾವರಂ ಎಂಬಲ್ಲಿಗೆ ಹೋಗುತ್ತಿದ್ದರು. ರಾತ್ರಿ 7 ಗಂಟೆ ಸುಮಾರಿಗೆ ಧರ್ಮಾವರಂ ಬಳಿ ಮತ್ತೆ ಅದೇ ವಿಷಯಕ್ಕೆ ಸಿಟ್ಟಾದ ಪಾವನಿ ಜತೆಗೆ ತಂದಿದ್ದ ಚಾಕುವಿನಿಂದ ಏಕಾಏಕಿ ಪ್ರಿಯಕರನ ಬೆನ್ನಿಗೆ ಇರಿದಿದ್ದಾಳೆ. ನಂತರ ಇಬ್ಬರೂ ಬೈಕ್ನಿಂದ ಬಿದ್ದಿದ್ದಾರೆ. ಬಿದ್ದ ಮೇಲೆ ಸುಧಾರಿಸಿಕೊಂಡ ಆಕೆ ಅಷ್ಟಕ್ಕೆ ಸುಮ್ಮನಾಗದೆ ಗಾಯಗೊಂಡ ಪ್ರಿಯಕರನನ್ನು ಮತ್ತೆ ಮತ್ತೆ ಇರಿದಿದ್ದಾಳೆ. ಬಳಿಕ ಆತನ ಶವದ ಮುಂದೆ ಕುಳಿತು ಗೆಳೆಯರಿಗೆ ಫೋನ್ ಮಾಡಿ ಹೇಳಿದ್ದಳು. ಈ ಮಾಹಿತಿ ಆಧರಿಸಿ ನಾವು ಅಲ್ಲಿಗೆ ತೆರಳಿ ಬಂಧಿಸಿದೆವು. ಕೊಲೆಯಾದ ಬಳಿಕವೂ ಅವಳು ಶಾಂತವಾಗಿಯೇ ಇದ್ದಳು. ಇರಿಯಲು ಅವಳು ಬಯಸಿದ ಆಯುಧ ಹಾಗೂ ಎರಡು ಫೋನ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)