ಇಂದೋರ್: ಲವ್ ಜಿಹಾದ್ ಕಾನೂನನ್ನು ಟೀಕಿಸುವವರು ಲವ್ಜಿಹಾದ್ನ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಇತರೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಲವ್ ಜಿಹಾದ್ನ ವ್ಯಾಖ್ಯಾನವನ್ನು ನಾವು ಅರ್ಥಮಾಡಿಕೊಳ್ಳಬೇಕು. ಲವ್ ಜಿಹಾದ್ ತಡೆಯುವ ಕಾನೂನು ರೂಪಿಸಿರುವುದರ ಉದ್ದೇಶ ಇಷ್ಟೆ - ಅಂತರ್-ಧರ್ಮೀಯ ವಿವಾಹಗಳ ಹಿಂದೆ ಇರುವ ಪಿತೂರಿಯನ್ನು ತಡೆಯುವುದಾಗಿದೆ. ಪ್ರೀತಿಗೆ ಕಣ್ಣಿಲ್ಲ. ಅದು ಧರ್ಮವನ್ನೋ ಅಥವಾ ಜಾತಿಯನ್ನೋ ನೋಡಿ ಹುಟ್ಟುವಂಥದ್ದಲ್ಲ. ಆದರೆ, ಯಾರು ಒಬ್ಬರನ್ನು ಒಂದು ನಿಶ್ಚಿತ ಉದ್ದೇಶ ಅಥವಾ ಅವರ ಧರ್ಮಕ್ಕೆ ಮತಾಂತರಿಸುವ ಉದ್ದೇಶದಿಂದ ವಿವಾಹವಾಗುತ್ತಾರೋ ಅಂಥ ಸನ್ನಿವೇಶದಲ್ಲಿ ಈ ಕಾನೂನು ಸಂತ್ರಸ್ತರ ನೆರವಿಗೆ ಬರುತ್ತದೆ ಎಂದು ಕೈಲಾಶ್ ವಿಜಯವರ್ಗೀಯ ವಿವರಿಸಿದ್ದಾರೆ.
ಇದನ್ನೂ ಓದಿ: ಮುಗಿಯದ ಸಂಪುಟ ಸಂಕಟ: ಮುಗಿದ ಸಿಎಂ ಹೇಳಿದ ಸಮಯ
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶನಿವಾರ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜಾರಿಗೊಳಿಸುತ್ತಿರುವ ಲವ್ ಜಿಹಾದ್ ಕಾನೂನನ್ನು ಟೀಕಿಸಿದ್ದಕ್ಕೆ ಪ್ರತಿಯಾಗಿ ವಿವರಣೆ ನೀಡಿದರು. ಲವ್ ಜಿಹಾದ್ ವ್ಯಾಖ್ಯಾನದ ವ್ಯಾಪ್ತಿಗೆ ಬಿಜೆಪಿ ನಾಯಕರ ಕುಟುಂಬ ಸದಸ್ಯರು ಬರುತ್ತಾರೆಯೇ ಎಂದು ಬಘೇಲ್ ಟೀಕಿಸಿದ್ದರು. (ಏಜೆನ್ಸೀಸ್ )