ನ್ಯೂಸ್

ತೆಲುಗು ಯುವಕನಿಗೆ ಮನಸೋತ ಫ್ರಾನ್ಸ್​ ಬೆಡಗಿ: ಹಿಂದು ಸಂಪ್ರದಾಯದಂತೆ ನಡೆಯಿತು ಅದ್ಧೂರಿ ಮದುವೆ! Love marriage

ಹೈದರಾಬಾದ್​: ಪ್ರೀತಿಗೆ ಯಾವುದೇ ಮಿತಿ ಅಥವಾ ಗಡಿಗಳಿಲ್ಲ. ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ಭಾಷೆ, ವಯಸ್ಸು, ಗಡಿ ಹಾಗೂ ಅಂತಸ್ತು ಎಲ್ಲವನ್ನು ಮೀರಿದ್ದು ಎನ್ನುತ್ತಾರೆ. ತನ್ನ ಪ್ರೇಮಿಯನ್ನು ಮದುವೆಯಾಗಲು ದೇಶ ಬಿಟ್ಟು ಹೋಗುವವರೂ ಇದ್ದಾರೆ, ವಿದೇಶದಿಂದ ಬಂದವರೂ ಇದ್ದಾರೆ. ಪ್ರೀತಿ ಒಂದು ಮಧುರ ಭಾವನೆ. ಪ್ರೀತಿ ಎಂದರೆ ಎರಡು ಮನಸ್ಸುಗಳ ಮಿಲನ. ಪ್ರೀತಿಸಿದವರನ್ನು ಪಡೆದುಕೊಳ್ಳಲು ಕೆಲವರು ಏನು ಬೇಕಾದರೂ ಮಾಡುತ್ತಾರೆ. ಕೆಲವರು ಹಿರಿಯರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವನ್ನು ( Love marriage ) ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಎರಡೂ ಮನೆಯವರನ್ನು ಒಪ್ಪಿಸಿ, ಪ್ರೀತಿಯಲ್ಲಿ ಗೆದ್ದು ಮದುವೆಯಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ತೆಲಂಗಾಣ ರಾಜ್ಯದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಿಮ್ಮಾಪುರ ಗ್ರಾಮದ ಯುವಕನೊಬ್ಬ ಫ್ರಾನ್ಸ್‌ನ ಯುವತಿಯನ್ನು ಪ್ರೀತಿಸಿ, ಹಿರಿಯರ ಮನವೊಲಿಸಿ, ಹಿಂದೂ ಸಂಪ್ರದಾಯಗಳ ಪ್ರಕಾರ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಈ ಅಂತಾರಾಷ್ಟ್ರೀಯ ಪ್ರೇಮ ವಿವಾಹ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ತಿಮ್ಮಾಪುರದ ಮೂಲದ ಚೈತನ್ಯ, ಕೆಲಸ ಮಾಡುತ್ತಾ ಹಲವಾರು ವರ್ಷಗಳಿಂದ ಫ್ರಾನ್ಸ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ ಚೈತನ್ಯ ಅವರಿಗೆ ಸಾನ್ವಿ ( ನಿಜವಾದ ಹೆಸರು ಇಮೆನ್ ) ಹೆಸರಿನ ಫ್ರೆಂಚ್ ಯುವತಿಯ ಪರಿಚಯವಾಯಿತು. ಈ ಪರಿಚಯ ಪ್ರೀತಿಯಾಗಿ ಬದಲಾಯಿತು. ಎಷ್ಟರಮಟ್ಟಿಗೆ ಅಂದರೆ, ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಕೊನೆಗೂ ಮದುವೆಯಾಗಲು ನಿರ್ಧರಿಸಿದರು.

ಬಳಿಕ ತಮ್ಮ ಪ್ರೀತಿ ವಿಚಾರವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಒಪ್ಪಿಗೆ ಪಡೆದುಕೊಂಡರು. ಇದೀಗ ಚೈತನ್ಯ ಮತ್ತು ಸಾನ್ವಿ ಹಿಂದೂ ಸಂಪ್ರದಾಯಗಳ ಪ್ರಕಾರ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ವಧುವಿನ ಪಾಲಕರಾದ ಬೆನ್ ಮತ್ತು ನೇದ್ರಾ ಬೆನ್, ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಪ್ಯಾರಿಸ್‌ನಿಂದ ತೆಲಂಗಾಣಕ್ಕೆ ಆಗಮಿಸಿ, ನವದಂಪತಿಯನ್ನು ಆಶೀರ್ವದಿಸಿದರು.

ಅಂದಹಾಗೆ, ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನು ಧರಿಸಿದ್ದ ಸಾನ್ವಿ, ಥೇಟ್​ ತೆಲುಗು ವಧುವಿನ ಲುಕ್​ನಿಂದ ಎಲ್ಲರನ್ನೂ ಆಕರ್ಷಿಸಿದರು. ಅದ್ಧೂರಿಯಾಗಿ ನಡೆದ ಈ ಮದುವೆಯಲ್ಲಿ ಸಂಬಂಧಿಕರು ಮತ್ತು ಗ್ರಾಮಸ್ಥರು ಭಾಗವಹಿಸಿದರು. ಈ ಹಿಂದೆ ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಯುವತಿಯರು ಭಾರತದ ಯುವಕರನ್ನು ಮದುವೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. (ಏಜೆನ್ಸೀಸ್​)