ಬೆಂಗಳೂರು: ಸ್ಪೇನ್‌ನ ಖ್ಯಾತ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ಪ್ರಸಿದ್ಧ ಕಾದಂಬರಿಯ ಹೆಸರು ‘ಲವ್ ಇನ್ ದ ಟೈಮ್ ಆಫ್ ಕಾಲರಾ’. ಕಳೆದೆರಡು ದಿನಗಳಲ್ಲಿ ನಡೆದಿರುವ ಎರಡು ನೈಜ ಘಟನೆಗಳನ್ನು ನೋಡಿದರೆ ಆ ಕಾದಂಬರಿಯ ಹೆಸರು ನೆನಪಾಗದೇ ಇರದು. ಆ ಕಾದಂಬರಿಯಲ್ಲಿ ಪ್ರೇಮಿಗಳು ಕೊನೆಗೂ ಒಂದಾದರೆ, ಇಲ್ಲಿ ‘ಕರೊನಾ ಕಾಲದಲ್ಲೂ ಪ್ರೀತಿಪ್ರೇಮ’ಕ್ಕೆ ಕಟ್ಟುಬಿದ್ದು ಇಬ್ಬರು ಪ್ರೇಮಿಗಳು ಜೀವವನ್ನೇ ಕಳೆದುಕೊಂಡಿದ್ದಾರೆ.
ಅಂತಿಮ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಪಿರಿಯಾಪಟ್ಟಣ ತಾಲೂಕಿನ ಶೆಟ್ಟಯ್ಯನಕೊಪ್ಪಲು ಗ್ರಾಮದ ರಶ್ಮಿ ತನಗಿಂತ ಚಿಕ್ಕವನಾದ ಹುಣಸೂರಿನ ಯುವಕನನ್ನು ಪ್ರೀತಿಸಿದ್ದಳು. ಆಕೆಗೆ 21 ವರ್ಷ ವಯಸ್ಸಾದರೆ, ಆತನಿಗಿನ್ನೂ 18 ವರ್ಷ ವಯಸ್ಸು. ಈ ವಿಷಯ ಏಕಾಏಕಿ ಆಕೆಯ ಪಾಲಕರಿಗೆ ತಿಳಿಯಿತು. ಪ್ರೀತಿಸುತ್ತಿರುವ ಹುಡುಗ ಯುವತಿಗಿಂತ ಚಿಕ್ಕವನು ಎಂಬ ಕಾರಣಕ್ಕೆ ಆಕೆಯ ಪಾಲಕರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ ಆಕೆಗೆ ತಿಳಿವಳಿಕೆ ಹೇಳಿದ್ದರು.
ಅಲ್ಲದೇ, ಸ್ಥಳ ಬದಲಾವಣೆ ಮತ್ತು ಮನಸ್ಸು ಪರಿವರ್ತನೆಗಾಗಿ ಆಕೆಯನ್ನು ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿನ ತಾತನ ಮನೆಗೆ ಕರೆತಂದು ಬಿಟ್ಟಿದ್ದರು. ಇದರಿಂದ ಮನನೊಂದಿದ್ದ ರಶ್ಮಿ ಗುರುವಾರ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ತಂದೆ ರವಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.
ಇನ್ನೊಂದು ಘಟನೆ ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿ ನಡೆದಿದೆ. ಮೈಬೂಬಸಾಬ ಜಂಬಳಿ (25) ಎಂಬ ಯುವಕ ಇಲ್ಲಿನ ಪೈಗಂಬರ್ ನಗರದಲ್ಲಿನ ಹಿಂದು ಸಮುದಾಯದ ಯುವತಿಯನ್ನು ಪ್ರೀತಿಸುತಿದ್ದ. ಗುರುವಾರ ಸಂಜೆ ಪೈಗಂಬರ ನಗರಕ್ಕೆ ಯುವಕ ಬಂದಾಗ ಯುವತಿಯ ಕುಟುಂಬದವರು ಆತನನ್ನು ತಡೆದು ಜಗಳ ಮಾಡಿದ್ದಲ್ಲದೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ!
ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಪ್ಪ, ದೇವಪ್ಪ ಎಂಬವರೂ ಸೇರಿ ಒಂಬತ್ತು ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.