Share Market : ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಕ್ಕೆ ಮನನೊಂದು ಪೊಲೀಸ್ ಕಾನ್ಸ್ಟೆಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹೈದರಾಬಾದ್ನ ಅಂಬರಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಪೇದೆಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರು ಮದನಪೇಟ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದರು. ಅಂಬರಪೇಟ್ನ ದುರ್ಗಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ನಷ್ಟ ಅನುಭವಿಸಿದ ನಂತರ ತುಂಬಾ ಖಿನ್ನತೆಗೆ ಒಳಗಾಗಿದ್ದ ವೆಂಕಟೇಶ್, ಈ ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ.
ವೆಂಕಟೇಶ್ ಪಾಲಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೆಂಕಟೇಶ್ ಸೂರ್ಯಪೇಟ್ ಜಿಲ್ಲೆಯವರು. ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.
ಅಂದಹಾಗೆ 2024ರಲ್ಲಿ ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅನಂತಪುರ ಜಿಲ್ಲೆಯ ಕುದೇರು ಮಂಡಲದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಬಾಬು, ತಮ್ಮ ಸ್ನೇಹಿತರನ್ನು ನಂಬಿ ಷೇರು ಮಾರುಕಟ್ಟೆ ಮತ್ತು ಆನ್‌ಲೈನ್ ವ್ಯವಹಾರದಲ್ಲಿ ಭಾರಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿದ್ದ ಭಾಸ್ಕರ್ ಸಾಲದ ಅಪ್ಲಿಕೇಶನ್‌ಗಳು, ಬ್ಯಾಂಕ್‌ಗಳು ಮತ್ತು ಆಪ್ತ ಸ್ನೇಹಿತರಿಂದ ಸಾಲ ಪಡೆದು 60 ಲಕ್ಷ ರೂ. ಹೂಡಿಕೆ ಮಾಡಿದ್ದರು.
ಸ್ವಲ್ಪ ಸಮಯದವರೆಗೆ, ಲಾಭದ ಹೆಸರಿನಲ್ಲಿ ಪ್ರತಿ ತಿಂಗಳು ಹಣ ನೀಡಿದ್ದ ಅವರ ಸ್ನೇಹಿತರು ಏಪ್ರಿಲ್ 2024 ರಿಂದ ಅವರಿಗೆ ಯಾವುದೇ ಲಾಭವನ್ನು ನೀಡಲಿಲ್ಲ. ಈ ಪ್ರಕ್ರಿಯೆಯಲ್ಲಿ, ಸಾಲದ ಹೊರೆ ಹೆಚ್ಚಾಯಿತು ಮತ್ತು ಬ್ಯಾಂಕ್‌ಗಳು ಹಾಗೂ ಸಾಲದ ಅಪ್ಲಿಕೇಶನ್‌ಗಳಿಗೆ ಇಎಂಐಗಳನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಒಂದೆಡೆ, ಇಎಂಐಗಳ ಒತ್ತಡ, ಮತ್ತೊಂದೆಡೆ ಸಾಲ ನೀಡಿದವರ ಒತ್ತಡ. ನೋವು ಸಹಿಸಲಾಗದೆ, 2024, ಡಿಸೆಂಬರ್ 22ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. (ಏಜೆನ್ಸೀಸ್)