ತಮಿಳುನಾಡು: ಆನ್‌ಲೈನ್ ಜೂಟಾಟದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರು, ಮತ್ತೆ ಮತ್ತೆ ಆನ್‌ಲೈನ್ ಜೂಜಾಟಕ್ಕೆ ದಾಸರಾಗುತ್ತಿರುವವರು ಹೆಚ್ಚುತ್ತಿದ್ದಾರೆ. ಇದೀಗ ಕೊಯಮತ್ತೂರಿನ 22 ವರ್ಷದ ಯುವಕನೊಬ್ಬ ಆನ್ಲೈನ್ನಲ್ಲಿ ಜೂಜಾಡಿ ಹಣ ಕಳೆದುಕೊಂಡಿದ್ದಾನೆ. ಇದರಿಂದ ಮನನೊಂದ ಯುವಕ ಆತ್ಮಹತ್ಯಗೆ ಶರಣಾಗಿದ್ದಾನೆ.
ಪೊಲೀಸ್ ಮಾಹಿತಿಯ ಪ್ರಕಾರ ಕಳೆದ ಐದು ತಿಂಗಳಿನಿಂದ ಯುವಕ ಆನ್ಲೈನ್ನಲ್ಲಿ ನಿರಂತರವಾಗಿ ರಮ್ಮಿ ಆಟವಾಡಿಕೊಂಡು ಬಂದಿದ್ದಾನೆ. ರಮ್ಮಿ ಆಟಕ್ಕೆ ದಾಸನಾಗಿ, ಕೊನೆಗೆ ಸ್ನೇಹಿತರಿಂದ ಹಣ ಕೇಳುತ್ತಿದ್ದ. ರಮ್ಮಿ ಆಟದ ಜಾಲಕ್ಕೆ ಸಿಲುಕಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಇದರಿಂದ ಯುವಕ ನೊಂದುಕೊಂಡಿದ್ದ. ಹೀಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಆಟಗಳಿಂದಾಗಿ ಇದೀಗ ಬಹುಸಂಖ್ಯೆಯ ಯುವಜನತೆ ಆತ್ಮಹತ್ಯಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ತಮಿಳುನಾಡು ಸರ್ಕಾರ ನವೆಂಬರ್ನಲ್ಲಿ ಆನ್‌ಲೈನ್ ಜೂಜು ಮತ್ತು ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ವಿಧಾನಸಭೆಯು ಜೂಜಾಟದ ವಿರುದ್ಧ ಮಸೂದೆಯನ್ನು ಅಂಗೀಕರಿಸಿದೆ. ಸದ್ಯದಲ್ಲೇ ಈ ಆದೇಶ ಜಾರಿಗೆ ಬರಲಿದೆ. (ಏಜೆನ್ಸೀಸ್)