ನ್ಯೂಸ್

ದಾವಣಗೆರೆ | ಫೋನ್​ ಪೇ ಮೂಲಕ 50 ಸಾವಿರ ರೂ. ಲಂಚ ಪಡೆದಿದ್ದ ಪಿಎಸ್​ಐ ಮತ್ತು ಪೇದೆ ಲೋಕಾಯುಕ್ತ ಬಲೆಗೆ

ದಾವಣಗೆರೆ: ಡಿಜಿಟಲ್ ಪಾವತಿ ಮೂಲಕ ಲಂಚ ಪಡೆದುಕೊಂಡಿದ್ದ ಪಿಎಸ್​​ಐ ಹಾಗೂ ಪೇದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆ ಪಿಎಸ್​ಐ ಶಿವನಗೌಡ ಹಾಗೂ ಪೇದೆ ನಾಗರಾಜ್ ನಾಯ್ಕ್ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸರು.

50 ಸಾವಿರ ರೂ. ನೀಡದರೆ ಮಾತ್ರ ಪ್ರಕರಣ ದಾಖಲು

ಹೊಳಲ್ಕೆರೆ ತಾಲ್ಲೂಕಿನ ಮಹಿಳೆಯೊಬ್ಬರ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರು ನೀಡಲು ಬಂದಿದ್ದ ಮಹಿಳೆಯ ತಂದೆ ಬಳಿ 50 ಸಾವಿರ ರೂ. ನೀಡದರೆ ಮಾತ್ರ ಪ್ರಕರಣ ದಾಖಲಿಸುವುದಾಗಿ ಪಿಎಸ್​​ಐ ಶಿವನಗೌಡ ಹಾಗೂ ಪೇದೆ ನಾಗರಾಜ್ ನಾಯ್ಕ್ ಹೇಳಿದ್ದರು.

ಫೋನ್​ ಪೇ ಮೂಲಕ ಹಣ ವರ್ಗಾವಣೆ

ಲಂಚ ನೀಡಲಾಗದೆ ಕಾಣೆಯಾಗಿದ್ದ ಮಹಿಳೆ ತಂದೆ ರಂಗಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಲೋಕಾಯುಕ್ತ ಅಧಿಕಾರಿಗಳನ್ನು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರನ್ನು ಬಲೆಗೆ ಬೀಳಿಸಲು ಮುಂದಾಗಿದ್ದಾರೆ. ಅದರಂತೆ ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ದೂರು ನೀಡಲು ಬಂದಿದ್ದ ರಂಗಸ್ವಾಮಿ, ಫೋನ್​ಪೇ ಮೂಲಕ ಹಣ ವರ್ಗಾಯಿಸಿದ್ದಾರೆ. ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಪಿಎಸ್​​ಐ ಹಾಗೂ ಪೇದೆಯನ್ನು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಸದ್ಯ ಪಿಎಸ್​ಐ ಶಿವನಗೌಡ ಹಾಗೂ ಪೇದೆ ನಾಗರಾಜ್​ ನಾಯ್ಕ್​ನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.