ಕಲ್ಕತ್ತಾ: ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಭರಾಟೆ ಜೋರಾಗಿದ್ದು, ಇಂದು (ಜೂನ್ 01) ಏಳನೇ ಹಂತದ ಮತದಾನ ನಡೆಯುತ್ತಿದೆ. ಏಳನೇ ಹಂತದಲ್ಲಿ ಒಟ್ಟು 57 ಲೋಕಸಭೆ ಕ್ಷೇತ್ರಗಳು ಒಳಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಪಂಜಾಬ್ ಸಿಎಂ ಭಗವಂತ್ ಮಾನ್, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸದಾ ಗದ್ದಲ ಹಾಗೂ ಗಲಭೆಗಳಿಂದಲೇ ಹೆಚ್ಚು ಅಪಖ್ಯಾತಿ ಪಡೆದಿರುವ ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳ ಗುಂಪೊಂದು ವೋಟಿಂಗ್ ಮೆಷಿನ್ ಹಅಗೂ ವಿವಿಪ್ಯಾಟ್ಅನ್ನು ಚರಂಡಿಗೆ ಎಸೆದಿರುವ ಘಟನೆ ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿ ಮತಗಟ್ಟೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, ಇಂದು (ಜೂನ್ 01) ಬೆಳಿಗ್ಗೆ 6.40ರ ಸುಮಾರಿಗೆ ಬೇನಿಮಾಧವಪುರ ಎಫ್‌ಪಿ ಶಾಲೆಯ ಬಳಿ ಸೆಕ್ಟರ್ ಆಫೀಸರ್‌ನ ಮೀಸಲು ಇವಿಎಂಗಳು ಮತ್ತು ಪೇಪರ್‌ಗಳನ್ನು, ಸ್ಥಳೀಯ ಜನರು ಲೂಟಿ ಮಾಡಿದ್ದಾರೆ. 2 VVPAT ಯಂತ್ರಗಳನ್ನು ಚರಂಡಿಗೆ ಎಸೆಯಲಾಗಿದೆ. ಸೆಕ್ಟರ್ ಅಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ. ಸೆಕ್ಟರ್‌ನ ಎಲ್ಲಾ ಆರು ಬೂತ್‌ಗಳಲ್ಲಿ ಹೊಸ ಇವಿಎಂ ಮತ್ತು ಪೇಪರ್‌ಗಳನ್ನು ಒದಗಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.