ಬೆಂಗಳೂರು: ರಾಜ್ಯರಾಜಧಾನಿಯಲ್ಲಿ ಲಾಕ್‍ಡೌನ್ ಘೋಷಣೆಗೆ ಹಿಂದೇಟು ಹಾಕುತ್ತಿದ್ದ ಸರ್ಕಾರ ಕೊನೆಗೂ ತಜ್ಞರ ಸಲಹೆಗೆ ತಲೆ ಬಾಗಿದ್ದು, ಜು.14ರ ರಾತ್ರಿಯಿಂದಲೇ ಒಂದು ವಾರ ಬೆಂಗಳೂರು ನಗರ ಮತ್ತು ಬೆಂ. ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡುವುದಾಗಿ ಘೋಷಿಸಿದೆ.
ಜು.14(ಮಂಗಳವಾರ) ರಾತ್ರಿ 8 ಗಂಟೆಯಿಂದ ಜು.22ರ ಬೆಳಗ್ಗೆ 5 ಗಂಟೆವರೆಗೆ ಬೆಂ. ನಗರ ಮತ್ತು ಬೆಂ. ಗ್ರಾಮಾಂತರ ಜಿಲ್ಲೆಗಳು ಕಂಪ್ಲೀಟ್ ಲಾಕ್ ಆಗಲಿವೆ.
ಲಾಕ್‍ಡೌನ್ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧ, ದಿನಬಳಕೆಯ ಅಗತ್ಯ ವಸ್ತು ಲಭ್ಯವಿರುತ್ತವೆ. ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳೂ ನಡೆಯಲಿವೆ. ವಿವರವಾದ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವಿಕೆ, ಸರ್ಕಾರ ಹೊರಡಿಸುವ ಲಾಕ್‍ಡೌನ್ ಸಂಬಂಧಿತ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸಿಎಂ ಮನವಿ ಮಾಡಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಕರೊನಾ ನಿಯಂತ್ರಿಸುವ ಕಾರ್ಯದಲ್ಲಿ ಕೈ ಜೋಡಿಸಿ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಕೋವಿಡ್ ಸೋಂಕು ಮಣಿಸುವ ಹೋರಾಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಹಾಗೂ ಎಲ್ಲ ಅಧಿಕಾರಿಗಳು, ಸ್ವಯಂ ಸೇವಕರು, ಪತ್ರಕರ್ತರಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದ್ದಾರೆ.