ಹರಿಯಾಣ: ಲಾಕ್ಡೌನ್ ಹಿನ್ನೆಲೆಯಲ್ಲಿ ಅನೇಕ ಶಾಲೆಗಳ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದಾಗಲೇ ಪ್ರವೇಶಾತಿ ಮುಗಿದು ಇನ್ನೇನು ಶಾಲೆ ಶುರುವಾಗುವ ವೇಳೆಯಾಗಿತ್ತು. ಆದರೆ ಕರೊನಾ ವೈರಸ್ನಿಂದಾಗಿ ಹಲವಾರು ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಕೂಡ ಹಣ ಇಲ್ಲದ ಸಮಸ್ಯೆ ತಲೆದೋರಿದೆ.
ಈ ನಡುವೆಯೇ ಸರ್ಕಾರಗಳು, ಮಕ್ಕಳಿಂದ ಶಾಲಾ ಶುಲ್ಕವನ್ನು ವಸೂಲಿ ಮಾಡಬಾರದು ಎಂಬ ಆದೇಶ ಹೊರಡಿಸಿದೆ. ಏಕೆಂದರೆ ಎಷ್ಟೋ ಪಾಲಕರಿಗೂ ಲಾಕ್ಡೌನ್ ಸಂಕಷ್ಟದ ಸಮಯ. ಶಾಲಾ ಶುಲ್ಕವನ್ನು ನೀಡಲು ಆಗದ ಸಮಯವಿದು. ಆದ್ದರಿಂದ ಶುಲ್ಕ ವಸೂಲಿ ಮಾಡಬಾರದು ಎಂದು ಶಾಲೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು.
ಈ ಆದೇಶದಿಂದ ತಾವು ಸಂಕಷ್ಟಕ್ಕೆ ಸಿಲುಕಿರುವುದಾಗಿ ಪಂಜಾಬ್ ಮತ್ತು ಹರಿಯಾಣದ ಕೆಲವು ಶಾಲೆಗಳು ಅಲ್ಲಿಯ ಹೈಕೋರ್ಟ್ ಮೊರೆ ಹೋಗಿದ್ದವು. ಪಂಜಾಬ್ ಮತ್ತು ಹರಿಯಾಣದಲ್ಲಿ ಮಕ್ಕಳಿಂದ ಬೋಧನಾ ಶುಲ್ಕವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕ ಪಡೆಯಬಾರದು ಎಂಬ ಆದೇಶ ಮಾಡಿರುವ ಹಿನ್ನೆಲೆಯಲ್ಲಿ, ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ ಎಂದು ಶಾಲೆಗಳು ಕೋರ್ಟ್ನಲ್ಲಿ ದೂರಿದ್ದವು.
ಹೀಗೆ ಪರಿಸ್ಥಿತಿ ಮುಂದುವರೆದರೆ ಸಂಬಳವನ್ನೇ ನೆಚ್ಚಿಕೊಂಡಿರುವ ಶಿಕ್ಷಕರಿಗೆ ಬಹಳ ಅನ್ಯಾಯವಾಗುತ್ತದೆ, ಜತೆಗೆ ಶಾಲೆಯ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ ಎಂದು ಶಾಲೆಗಳು ತಿಳಿಸಿದವು.
ಶಾಲೆಗೆ ಸ್ಪಂದಿಸಿರುವ ಪಂಜಾಬ್-ಹರಿಯಾಣ ಹೈಕೋರ್ಟ್, ತನ್ನ ಮುಂದಿನ ಆದೇಶದವರೆಗೆ ಪಾಲಕರಿಂದ ಶೇ.70ರಷ್ಟು ಶುಲ್ಕವನ್ನು ವಸೂಲು ಮಾಡಲು ಅಲ್ಲಿಯ ಶಾಲೆಗಳಿಗೆ ಅನುಮತಿ ನೀಡಿದೆ. ಸಂಪೂರ್ಣ ಎಷ್ಟು ಶುಲ್ಕ ಇದೆಯೋ, ಅದರ ಶೇ.70ರಷ್ಟು ಭಾಗದ ಫೀಸ್ ಪಡೆಯುವಂತೆ ಹೇಳಿದೆ. ಇದೇ ವೇಳೆ ಶಿಕ್ಷಕರಿಗೆ ಕೂಡ ಸಂಪೂರ್ಣ ಸಂಬಳದ ಬದಲು ತನ್ನ ಮುಂದಿನ ಆದೇಶದವರೆಗೆ ಶೇ.70ರಷ್ಟು ಸಂಬಳವನ್ನು ನೀಡುವಂತೆಯೂ ಹೇಳಿದೆ.
ಇದರಿಂದ ಸದ್ಯ ಶಾಲೆಗಳು ಹಾಗೂ ಶಿಕ್ಷಕರು ನಿರಾಳರಾಗಿದ್ದಾರೆ. ಜೂನ್ 12ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಿರುವ ಕೋರ್ಟ್, ಅಲ್ಲಿಯವರೆಗೆ ತನ್ನ ಆದೇಶ ಪಾಲನೆ ಮಾಡುವಂತೆ ಹೇಳಿದೆ. (ಏಜೆನ್ಸೀಸ್)