ನ್ಯೂಸ್

ಸಾಸಿವೆ ಎಣ್ಣೆ ಟ್ಯಾಂಕರ್ ಪಲ್ಟಿ; ಬಾಟಲಿ, ಬಕೆಟ್​ ಹಿಡಿದು ನಾ ಮುಂದು ತಾ ಮುಂದು ಎಂದು ನುಗ್ಗಿದ ಸ್ಥಳೀಯರು!

ರಾಜಸ್ಥಾನ: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಸಾಸಿವೆ ಎಣ್ಣೆ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಲೀಟರ್ ಗಟ್ಟಲೆ ತೈಲ ರಸ್ತೆಯ ಪಾಲಾಗಿದೆ. ಈ ವೇಳೆ ಘಟನೆ ಬಗ್ಗೆ ಅರಿತ ಸ್ಥಳೀಯರು ಬಕೆಟ್​, ಬಾಟಲಿ ಹಿಡಿದು ಲಾರಿಯಿಂದ ಎಣ್ಣೆಯನ್ನು ದೋಚಲು ಭಾರೀ ಪೈಪೋಟಿ ನಡೆಸಿರುವ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ರಸ್ತೆಯ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಸಾಸಿವೆ ಎಣ್ಣೆಯಿಂದ ತುಂಬಿದ್ದ ಲಾರಿಯನ್ನು ಕಂಡ ಸ್ಥಳೀಯರು, ಕೂಡಲೇ ಬಾಟಲಿ ಮತ್ತು ಡಬ್ಬಗಳನ್ನು ಹಿಡಿದು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ತೈಲವನ್ನು ಸಂಗ್ರಹಿಸಲು ನಾ ಮುಂದು ತಾ ಮುಂದು ಎಂದು ತಮ್ಮಲ್ಲೇ ಪೈಪೋಟಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪೊಲೀಸ್​ ಅಧಿಕಾರಿಯೊಬ್ಬರು, "ಲಾರಿಯು ಗುಜರಾತ್‌ನ ಗಾಂಧಿಧಾಮದಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಟ್ಯಾಂಕರ್​ ಪಲ್ಟಿಯಾಗುತ್ತಿದ್ದಂತೆ ತೈಲ ರಸ್ತೆಯಲ್ಲಿ ಸೋರಿಕೆಯಾಗಿದೆ. ಕೂಡಲೇ ಸ್ಥಳೀಯರು ಬಾಟಲಿಗಳು ಮತ್ತು ಕಂಟೈನರ್‌ಗಳೊಂದಿಗೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಇದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಕೂಡ ಎದುರಾಯಿತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).