ನ್ಯೂಸ್

LIVE| ಭಗವಾನ್ ಬುದ್ಧನ ತತ್ತ್ವಾದರ್ಶಗಳು ಯಾವತ್ತಿಗೂ ಸಕಾಲಿಕ - ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂಟರ್​ನ್ಯಾಷನಲ್ ಬುದ್ಧಿಸ್ಟ್ ಕಾನ್ಫರೆನ್ಸ್​ ಆಯೋಜಿಸಿರುವ ಧರ್ಮಚಕ್ರ ದಿವಸ್ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದರು. ಆಷಾಢ ಪೂರ್ಣಿಮೆ ದಿನದ ನಿಮಿತ್ತ ಆಯೋಜಿಸಿರುವ ವರ್ಚುವಲ್ ಕಾರ್ಯಕ್ರಮವಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ ಅವರೂ ಭಾಗಿಯಾಗಿದ್ದಾರೆ.

ಸಾರಾನಾಥದ ರೂಪಪಟನಾದ ಜಿಂಕೆ ಉದ್ಯಾನದಲ್ಲಿ ತನ್ನ ಐವರು ಶಿಷ್ಯಂದಿರಿಗೆ ಭಗವಾನ್ ಬುದ್ಧ ಮೊದಲ ಬಾರಿ ಧರ್ಮೋಪದೇಶ ಮಾಡಿದ ದಿನ ಆಷಾಢ ಹುಣ್ಣಿಮೆ. ಈ ದಿನವನ್ನು ಸ್ಮರಿಸುವ ಸಲುವಾಗಿ ಧರ್ಮ ಚಕ್ರ ದಿವಸ್ ಆಚರಣೆ ಮಾಡಲಾಗುತ್ತಿದೆ. ಈ ದಿನವನ್ನು ಬೌದ್ಧರು ಮತ್ತು ಹಿಂದುಗಳು ಗುರುಪೂರ್ಣಿಮೆ ಎಂದು ಜಗತ್ತಿನಾದ್ಯಂತ ಆಚರಿಸುತ್ತಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುತ್ತಿದ್ದಾರೆ. ಅದರ ನೇರ ಪ್ರಸಾರ ಇಲ್ಲಿದೆ.

ಪ್ರಧಾನಿ ಮೋದಿಯವರ ಮಾತಿನ ಸಾರ ಇದು..

ಎಲ್ಲರಿಗೂ ಆಷಾಢ ಪೂರ್ಣಿಮೆಯ ದಿನದ ಶುಭಾಶಯಗಳು. ಈ ದಿನವನ್ನು ಗುರುಪೂರ್ಣಿಮೆ ಎಂದೂ ಹೇಳುತ್ತಾರೆ. ಈ ದಿನ ನಮಗೆ ತಿಳಿವಳಿಕೆಯನ್ನು ನೀಡುವ ಗುರುಗಳನ್ನು ಸ್ಮರಿಸುವ ದಿವಸ. ಈ ದೃಷ್ಟಿಯಿಂದಲೇ ನಾವು ಇವತ್ತು ಭಗವಾನ್​ ಬುದ್ಧನಿಗೂ ಗೌರವ ನಮನ ಸಲ್ಲಿಸುತ್ತಿದ್ದೇವೆ.

ಭಗವಾನ್ ಬುದ್ಧನ ತತ್ತ್ವಾದರ್ಶಗಳು ಅನೇಕ ಸಮುದಾಯಗಳ ಮತ್ತು ರಾಷ್ಟ್ರಗಳ ಏಳಿಗೆಗೆ ದಾರಿ ತೋರಿಸಿವೆ. ಕರುಣೆ ಮತ್ತು ಸಹಾನುಭೂತಿಯ ಮಹತ್ವವನ್ನು ಇವುಗಳು ಸಾರುತ್ತವೆ. ಭಗವಾನ್ ಬುದ್ಧನ ಸರಳತೆ ಚಿಂತನೆಯಲ್ಲೂ ಮತ್ತು ಕ್ರಿಯೆಯಲ್ಲೂ ಅನುಷ್ಠಾನಗೊಂಡಿವೆ.

ಇಂದು ಜಗತ್ತು ಕಂಡು ಕೇಳಿ ಅರಿಯದ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಪರಿಹಾರವು ಭಗವಾನ್ ಬುದ್ಧ ಅವರ ತತ್ತ್ವಾದರ್ಶಗಳಿಂದಲೇ ಸಿಗಬಹುದು. ಹಿಂದಿನ ಕಾಲದಲ್ಲಿ ಅವುಗಳು ಸಕಾಲಿಕವಾಗಿದ್ದವು. ಈಗಲೂ ಸಕಾಲಿಕವೇ ಆಗಿವೆ. ಭವಿಷ್ಯದಲ್ಲೂ ಈ ಚಿಂತನೆಗಳು ಸಕಾಲಿಕವಾಗಿಯೇ ಉಳಿಯಲಿವೆ.