ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ನ. 30ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಅಧಿಕಾರ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದೆ. ಕಣದಲ್ಲಿರುವ ಕಾಂಗ್ರೆಸ್, ಬಿಜೆಪಿ ಸೇರಿ ವಿವಿಧ ಪಕ್ಷಗಳು ಮತದಾರರನ್ನು ಸೆಳೆಯಲು ಆಕರ್ಷಕ ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಆದರೆ, ಇದೇ ವೇಳೆ ಡಿಸ್ನಿಲ್ಯಾಂಡ್ ಅನ್ನು ಹೈದರಾಬಾದ್‌ಗೆ ತರುವಂತೆ ತೆಲಂಗಾಣ ಸಚಿವ ಹಾಗೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರರಾಗಿರುವ ಕೆ,ಟಿ, ರಾಮರಾವ್ ಅವರ ಮುಂದೆ ಬೇಡಿಕೆಯೊಂದನ್ನು ಇಡಲಾಗಿದೆ.
ಈ ರೀತಿ ಬೇಡಿಕೆ ಇಟ್ಟವರು ಮತದಾರರಲ್ಲ; ಒಬ್ಬ ಹುಡುಗಿ. ಈ ಬಾಲಕಿಯ ಮುದ್ದು ಮನವಿಗೆ ಸಚಿವರು ಸ್ಪಂದಿಸಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ಅನೇಕ ಹೃದಯಗಳಿಗೆ ಲಗ್ಗೆ ಇಟ್ಟಿರುವ ಈ ವೈರಲ್ ವೀಡಿಯೊ ಸಾಕಷ್ಟು ವೈರಲ್ ಆಗಿದೆ. ಡಿಸ್ನಿಲ್ಯಾಂಡ್ ಅನ್ನು ಹೈದರಾಬಾದ್‌ಗೆ ತರಬೇಕೆಂದು ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಅವರಿಗೆ ಮಾಡುವ ವಿನಂತಿಯನ್ನು ಮುದ್ದುಮುದ್ದಾದ ಭಾಷೆಯಲ್ಲಿ ಹೇಳಿರುವುದು ಎಲ್ಲರ ಗಮನಸೆಳೆದಿದೆ. ಸಚಿವರು ಎಕ್ಸ್‌ನಲ್ಲಿ ಈ ವೀಡಿಯೊಗೆ ಪ್ರತಿಕ್ರಿಯೆನ್ನು ನೀಡಿದ್ದಾರೆ.
ಹುಡುಗಿಯ ತಂದೆಯಾಗಿರುವ ಸುರೇಂದ್ರ ವಿನಾಯಕಂ ಅವರು X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ತೆಲಂಗಾಣ ಚುನಾವಣೆ ಕುರಿತು ಕೆಟಿಆರ್‌ಗೆ ನನ್ನ ಮಗಳ ಮನವಿ" ಎಂದು ವಿಡಿಯೋ ಜತೆಯಲ್ಲಿ ಬರೆದಿದ್ದಾರೆ. ಹುಡುಗಿ ಪ್ರೀತಿಯಿಂದ ಸಚಿವರನ್ನು 'ಕೆಟಿಆರ್ ಮಾಮಾ' ಎಂದು ಸಂಬೋಧಿಸುತ್ತಾಳೆ ಹಾಗೂ ಡಿಸ್ನಿಲ್ಯಾಂಡ್‌ನ ಮಾಂತ್ರಿಕ ಜಗತ್ತನ್ನು ನಮ್ಮ ನಗರಕ್ಕೆ ತರಬಹುದೇ ಎಂದು ಕೇಳುತ್ತಾಳೆ.
ವಿಡಿಯೋವನ್ನು ಗಮನಿಸಿದ ಸಚಿವ ಕೆಟಿ ರಾಮರಾವ್ ಅವರು, ಇದನ್ನು ತಮ್ಮ ಬೆಂಬಲಿಗರೊಂದಿಗೆ ಹಂಚಿಕೊಂಡಿದ್ದಾರೆ. "ಬೇಟಾ, ಭರವಸೆ ನೀಡಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ" ಎಂದು ಆತ್ಮೀಯವಾಗಿ ಉತ್ತರಿಸಿದ್ದಾರೆ.
ನವೆಂಬರ್ 28 ರಂದು ಅಪ್‌ಲೋಡ್ ಮಾಡಲಾದ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ.