ವೆಂಕಟೇಶ್​ ಕುಮಾರ್​ 
ನ್ಯೂಸ್

ಜಿಲ್ಲೆಯಲ್ಲಿ ಕುಸಿದ ಮದ್ಯ ಮಾರಾಟ

ಕೋಲಾರ: ಮದ್ಯ ಮಾರಾಟ ಕುಸಿದಿರುವ ಹಿನ್ನಲೆಯಲ್ಲಿ ಗುರುವಾರ ನಗರಕ್ಕೆ ಭೇಟಿ ನೀಡಿದ್ದ ಅಬಕಾರಿ ಇಲಾಖೆಯ ಆಯುಕ್ತ ವೆಂಕಟೇಶ್​ ಕುಮಾರ್​ ಸನ್ನದುದಾರರ ಹಾಗೂ ಇಲಾಖಾಧಿಕಾರಿಗಳ ಸಭೆ ನಡೆಸಿದರು.

ಮಾರಾಟ ಕುಸಿಯಲು ಕಾರಣಗಳು ಏನು ಎಂಬುದರ ಬಗ್ಗೆ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಸರ್ಕಾರಕ್ಕೆ ಅಬಕಾರಿ ಇಲಾಖೆಯು ಆದಾಯ ಮೂಲವಾಗಿದ್ದು, ಇಚೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಕಡಿಮೆಯಾಗಿದ್ದು, ಸುಧಾರಣೆ ಮಾಡಿಕೊಳ್ಳಬೇಕು ಎಂದು ಆಯುಕ್ತ ವೆಂಕಟೇಶ್​ ಬಾಬು ಹೇಳಿದರು.

ಹೊಸ ಪರವಾನಗಿ ನೀಡುವಾಗ ಇಲಾಖೆಯ ಕಾಯ್ದೆಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸ್ಥಳಿಯ ಸಂಸ್ಥೆಗಳಿಂದ ಟ್ರೇಡ್​ ಲೈಸನ್ಸ್​ ಪಡೆದುಕೊಂಡಿದ್ದಾರೆಯೇ ಎಂಬುದು ಸೇರಿ ನಿಯಮಗಳ ಪರಿಶೀಲನೆ ಆಗಬೇಕು. ಲೋಪಗಳು ಇದಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ತಿಳಿಸಿದರು.

ಅಬಕಾರಿ ಇಲಾಖೆ ಉಪ ಆಯಕ್ತೆ ಸೈದಾ ಅಜಮತ್​ ಅಫ್ರೀನ್​, ಇನ್​ಸ್ಪೆಕ್ಟರ್​ ಜಯರಾಮ್​ ಇದ್ದರು.

* ಸರ್ಕಾರದ ಆದಾಯ ಮೂಲ ಅಬಕಾರಿ ಇಲಾಖೆ

ಸದ್ಯಕ್ಕೆ ಗಡಿ ಜಿಲ್ಲೆಗಳಲ್ಲಿ ಮಾರಾಟ ಕುಸಿಯುತ್ತಿದೆ. ಕಾರಣ ಕಲೆ ಹಾಕಲು ಆಗಮಿಸಿದ್ದು, ಮದ್ಯ ಮಾರಾಟ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಜೆಟ್​ನಲ್ಲೂ ಪ್ರಸಕ್ತ ಸಾಲಿನಲ್ಲಿ 40 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ ಎಂದು ಆಯುಕ್ತ ವೆಂಕಟೇಶ್​ಕುಮಾರ್​ ತಿಳಿಸಿದರು. ಅಬಕಾರಿ ಪರವಾನಗಿ ಪಡೆದುಕೊಳ್ಳುವ ಮುನ್ನ, ಮಳಿಗೆ ತೆರೆಯುವ ವ್ಯಾಪ್ತಿಯ ಸ್ಥಳಿಯ ಸಂಸ್ಥೆಯಿಂದ ವಾಣಿಜ್ಯ ಟ್ರೇಡ್​ ಲೈಸನ್ಸ್​ ಪಡೆದುಕೊಳ್ಳಬೇಕು. ಆ ಸಂದರ್ಭದಲ್ಲಿ ಭೂ ಪರಿವರ್ತನೆ, ಕಟ್ಟಡ ನಿರ್ಮಾಣ, ಮೂಲ ಸೌಲಭ್ಯ ಹೀಗೆ ಪರಿಶೀಲನೆ ಮಾಡುತ್ತಾರೆ. ಅಬಕಾರಿ ಇಲಾಖೆಯಿಂದ ದೇವಾಲಯ, ಶಾಲೆ, ಸರ್ಕಾರಿ ಕಚೇರಿ ಈವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಎನ್​ಒಸಿ ಪಡೆದುಕೊಂಡೇ ಲೈಸನ್ಸ್​ ನೀಡಬೇಕಾಗುತ್ತದೆ ಎಂದು ತಿಳಿಸಿದರು.

* ಅಗತ್ಯಕ್ಕೆ ತಕ್ಕಂತೆ ಬಂದ್​

ಜಾತ್ರೆ, ಜಯಂತಿ, ಚುನಾವಣೆ ವೇಳೆ ಬಾರ್​ಗಳನ್ನು ಬಂದ್​ ಮಾಡಿಸಲಾಗುತ್ತಿದೆ, ಇದು ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಕುರಿತು ಪ್ರತಿಕ್ರಿಯಿಸಿದ ಆಯುಕ್ತ ವೆಂಕಟೇಶ್​ ಕುಮಾರ್​, 144 ಸೆಕ್ಷನ್​ ಜಾರಿ ಆದಾಗ ಬಂದ್​ ಮಾಡಿಸುವುದು ಸಹಜ. ಸಂತೆ, ಜಾತ್ರೆ, ಜಯಂತಿಗಳು, ಚುನಾವಣೆಗಳ ವೇಳೆ ಎದುರಾಗುವ ಪರಿಣಾಮ ತಪ್ಪಿಸಲು ಕ್ರಮ ಕೈಗೊಳ್ಳಲು ಡಿಸಿಗೆ ಅಧಿಕಾರ ಇದ್ದು, ಆದೇಶ ಪಾಲನೆ ಮಾಡಬೇಕು ಎಂದರು.

* ಸಮಯ ಉಲ್ಲಂಘನೆ ಸಹಿಸಲ್ಲ

ಬೆಳ್ಳಂ ಬೆಳಗ್ಗೆ ಬಾರ್​ಗಳನ್ನು ತೆರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ವೆಂಕಟೇಶ್​ ಕುಮಾರ್​, ಬಾರ್​ಗಳನ್ನು ತೆಗೆಯಲು, ಮುಚ್ಚಲು ಸಮಯ ನಿಗದಿಪಡಿಸಲಾಗಿದೆ. ನಿಯಮ ಉಘಲ್ಲಂನೆ ಮಾಡುವವರ ಮೇಲೆ ನಿಗಾವಹಿಸಿದ್ದು ಪರಿಶೀಲನೆ ನಡೆಸಿ, ಸಮಯ ಮೀರಿ ಅಂಗಡಿ ತೆಗೆಯುವುದವರ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಹೇಳಿದರು.