ಲಖನೌ: ಕಾಸ್ಗಂಜ್ ಹತ್ಯಾಕಾಂಡದ ಮುಖ್ಯ ಆರೋಪಿ ಮತ್ತು ಸಾರಾಯಿ ಮಾಫಿಯಾ ನಾಯಕ ಮೋತಿ ಸಿಂಗ್ನನ್ನು ಉತ್ತರಪ್ರದೇಶ ಪೊಲೀಸರು ಭಾನುವಾರ ಗುಂಡಿಕ್ಕಿ ಕೊಂದಿದ್ದಾರೆ. ಮೃತ ಆರೋಪಿಯು ಹಿಸ್ಟರಿಶೀಟರ್ ಆಗಿದ್ದು, 11 ಕ್ರಿಮಿನಲ್ ಪ್ರಕರಣಗಳು ಅವನ ವಿರುದ್ಧ ದಾಖಲಾಗಿದ್ದವು ಎನ್ನಲಾಗಿದೆ.
ಫೆಬ್ರವರಿ 9 ರಂದು, ಮೋತಿ ಮತ್ತು ಅವನ ಸಹಚರರು ಕಾಸ್ಗಂಜಿನ ನಾಗ್ಲಾ ಧೀಮರ್ ಹಳ್ಳಿಗೆ ವಾರಂಟ್ ಹಿಡಿದು ರೇಡ್ ಮಾಡಲು ಹೋದ ಪೊಲೀಸರ ಮೇಲೆ ಗುಂಡಿನ ಚಕಮಕಿ ನಡೆಸಿದ್ದರು. ಸಿದ್ಧಪುರ ಠಾಣೆಯ ಪೊಲೀಸ್ ಪೇದೆ ದೇವೇಂದ್ರ ಮೃತಪಟ್ಟಿದ್ದಲ್ಲದೆ, ಸಬ್ಇನ್ಸ್ಪೆಕ್ಟರ್ ಗಾಯಗೊಂಡಿದ್ದರು. ಮೋತಿ ಸಿಂಗ್ನ ಸೋದರ ಎಲ್ಕಾರ್ ಕೂಡ ಸಾವಪ್ಪಿದ್ದ. ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಮೋತಿ ಸಿಂಗ್ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಕೂಡ ಘೋಷಿಸಲಾಗಿತ್ತು.
ಇದನ್ನೂ ಓದಿ: ಮನೆಯಲ್ಲೇ ಆರ್.ಟಿ.ಒ. ಕಛೇರಿ ನಡೆಸುತ್ತಿದ್ದ ಖದೀಮರು !
ಕಾಳಿ ನದಿ ತೀರದಲ್ಲಿರುವ ಕಾಡಿನಲ್ಲಿ ಮೋತಿ ಸಿಂಗ್ ಬಚ್ಚಿಟ್ಟುಕೊಂಡಿರುವುದಾಗಿ ಸುಳಿವು ಸಿಕ್ಕ ಪೊಲೀಸರು, ಅವನನ್ನು ಬಂಧಿಸಲು ತೆರಳಿದ್ದರು. ಮತ್ತೆ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಮೋತಿ ಸಿಂಗ್ಗೆ ಪೊಲೀಸರ ಗುಂಡು ತಾಗಿತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ ಎಂದು ಕಾಸ್ಗಂಜ್ ಎಸ್ಪಿ ಮನೋಜ್ ಸೋನ್ಕರ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ