ನ್ಯೂಸ್

ಬಾಲರಾಮನಿಗೆ ಸೂರ್ಯ ಸ್ಪರ್ಶ; ರಾಮನವಮಿಯಂದು ಹಣೆ ಮೇಲೆ ಬೀಳಲಿದೆ ಬೆಳಕು

Webdesk - Manjunatha B

ನವದೆಹಲಿ: ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಭವ್ಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮನ ಮೂರ್ತಿಯ ವಿಶೇಷತೆ ಈಗ ಬಹಿರಂಗಗೊಂಡಿದೆ. ಪ್ರಾಣ ಪ್ರತಿಷ್ಠಾಪನೆಗೆ ಒಳಗಾಗಲಿರುವ ಮೂರ್ತಿಯನ್ನು ಒಂದು ಸಾವಿರ ವರ್ಷ ಬಾಳಿಕೆ ಇರುವ ಕಡುಕಪು್ಪ ಶಿಲೆಯಿಂದ ಮಾಡಲಾಗಿದ್ದು, 51 ಇಂಚು ಎತ್ತರ, 1.5 ಟನ್ ತೂಕ ಹೊಂದಿರುತ್ತದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಈ ಮೂರ್ತಿಯ ಮುಖದಲ್ಲಿ ಐದು ವರ್ಷದ ಮಗುವಿನ ಮುಗ್ಧತೆ ಇರಲಿದೆ ಎಂದಿರುವ ಅವರು ಇನ್ನೊಂದು ಮಹತ್ವದ ಸಂಗತಿಯನ್ನೂ ತಿಳಿಸಿದ್ದಾರೆ.

ಈ ಪ್ರತಿಷ್ಠಾಪನೆ ಶಾಸ್ತ್ರೆೊಕ್ತವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ನಡೆಯಲಿದೆ. ಅಂದರೆ ಬಾಹ್ಯಾಕಾಶ ತಜ್ಞರ ಸಲಹೆಯೊಂದಿಗೆ ಈ ಮೂರ್ತಿಯನ್ನು ಸೂಕ್ತ ಎತ್ತರ ಮತ್ತು ಆಯಾಮದಲ್ಲಿ ಇರುವಂತೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅರ್ಥಾತ್, ಪ್ರತಿ ರಾಮನವಮಿ ಅಂದರೆ ಚೈತ್ರ ಮಾಸದ, ಶುಕ್ಲಪಕ್ಷದ 9ನೇ ದಿನದಂದು ಮ. 12ಕ್ಕೆ ಸರಿಯಾಗಿ ಸೂರ್ಯನ ಕಿರಣ ಈ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ಪ್ರತಿಷ್ಠಾಪನೆ ನಡೆಯಲಿದೆ ಎಂದಿರುವ ರೈ, ಉತ್ತರ ಭಾರತದಲ್ಲಿ ಕಳೆದ 300 ವರ್ಷಗಳಲ್ಲಿ ಇಂಥ ಯಾವುದೇ ದೇವಸ್ಥಾನ ನಿರ್ವಣವಾಗಿಲ್ಲ ಎಂದಿದ್ದಾರೆ.

ರಾಮನಿಗೆ ಬಂಗಾರದ ಪಾದುಕೆ!: ಅಯೋಧ್ಯೆಯ ಶ್ರೀರಾಮನಿಗಾಗಿ 64 ವರ್ಷದ ಭಕ್ತರೊಬ್ಬರು ಚಿನ್ನದ ಪಾದುಕೆಯನ್ನೇ ನೀಡಲಿದ್ದು, ಅದನ್ನು ಕಾಲ್ನಡಿಗೆಯಲ್ಲೇ ಕೊಂಡೊಯ್ದು ದೇವರಿಗೆ ಒಪ್ಪಿಸಲಿದ್ದಾರೆ. ಹೈದರಾಬಾದ್​ನ ಚಲ್ಲ ಶ್ರೀನಿವಾಸ ಶಾಸ್ತ್ರಿ ಎಂಬವರು ಸ್ವರ್ಣಲೇಪಿತ ಪಾದುಕೆಯನ್ನು ಶ್ರೀರಾಮನಿಗೆ ಒಪ್ಪಿಸಲು ರಾಮೇಶ್ವರ ಮಾರ್ಗವಾಗಿ ಅಯೋಧ್ಯೆಗೆ ಹೊರಟಿದ್ದಾರೆ. ಶ್ರೀರಾಮ ವನವಾಸಕ್ಕೆ ಹೋಗಿದ್ದ ಮಾರ್ಗವಾಗಿಯೇ ಅಯೋಧ್ಯೆ ತಲುಪುವ ಯೋಜನೆ ಹಾಕಿಕೊಂಡಿರುವ ಇವರು ಜು.20ರಂದು ಈ ಪ್ರಯಾಣ ಆರಂಭಿಸಿದ್ದಾರೆ. ಶಾಸ್ತ್ರಿ ಈಗಾಗಲೇ ಒಡಿಶಾದ ಪುರಿ, ಮಹಾರಾಷ್ಟ್ರದ ತ್ರಯಂಬಕ, ಗುಜರಾತ್​ನ ದ್ವಾರಕೆಯನ್ನು ಹಾದುಹೋಗಿದ್ದು, ಅಯೋಧ್ಯೆ ತಲುಪುವಷ್ಟರಲ್ಲಿ ಸುಮಾರು 8 ಸಾವಿರ ಕಿ.ಮೀ. ಕ್ರಮಿಸಲಿದ್ದಾರೆ. ಪಾದುಕೆಯನ್ನು ಶಿರದ ಮೇಲಿರಿಸಿಕೊಂಡು ಕಾಲ್ನಡಿಗೆಯಲ್ಲೇ ಹೊರಟಿರುವ ಇವರು ಅದನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಹಸ್ತಾಂತರಿಸುವ ಮೂಲಕ ದೇವರಿಗೆ ಅರ್ಪಿಸಲಿದ್ದಾರೆ.

ಸುಪ್ರೀಂಕೋರ್ಟ್ 2019ರಲ್ಲಿ ನೀಡಿದ್ದ ತೀರ್ಪಿನ ಬಳಿಕ ಶ್ರೀರಾಮಮಂದಿರ ನಿರ್ಮಾಣ ಸಲುವಾಗಿ ಇವರು ಈಗಾಗಲೇ ಐದು ಬೆಳ್ಳಿ ಇಟ್ಟಿಗೆಗಳನ್ನು ಕೂಡ ನೀಡಿದ್ದಾಗಿ ತಿಳಿಸಿದ್ದಾರೆ. ಪಂಚಲೋಹದಿಂದ ಮಾಡಲಾದ ಹಾಗೂ ಸ್ವರ್ಣಲೇಪಿತ ಈ ಪಾದುಕೆಗೆ 65 ಲಕ್ಷ ರೂ. ಆಗಿದ್ದು, ತಮ್ಮೊಂದಿಗೆ ಇತರರೂ ಕೈಜೋಡಿಸಿದ್ದಾಗಿ ತಿಳಿಸಿದ್ದಾರೆ. ಐವರೊಂದಿಗೆ ಹೊರಟಿರುವ ಶಾಸ್ತ್ರಿ ಸದ್ಯ ಉತ್ತರಪ್ರದೇಶದ ಚಿತ್ರಕೂಟದಲ್ಲಿದ್ದು, 272 ಕಿ.ಮೀ. ದೂರದಲ್ಲಿರುವ ಅಯೋಧ್ಯೆಯನ್ನು ಇನ್ನೊಂದು ಹತ್ತು ದಿನಗಳಲ್ಲಿ ತಲುಪುವ ಗುರಿ ಇರಿಸಿಕೊಂಡಿದ್ದಾರೆ. ‘ಅಯೋಧ್ಯ ಭಾಗ್ಯನಗರ ಸೀತಾರಾಮ ಪ್ರತಿಷ್ಠಾನ’ದ ಸಂಸ್ಥಾಪಕರೂ ಆಗಿರುವ ಶಾಸ್ತ್ರಿ, ಭವಿಷ್ಯದಲ್ಲಿ ಅಯೋಧ್ಯೆಯಲ್ಲಿ ಮನೆ ಮಾಡಿಕೊಂಡು ಕಾಯಂ ಆಗಿ ಅಲ್ಲೇ ನೆಲೆಸುವ ಧ್ಯೇಯ ಇರಿಸಿಕೊಂಡಿದ್ದಾರೆ. ಸೌಂಡ್ ಇಂಜಿನಿಯರ್ ಆಗಿರುವ ಇವರು ಹಲವಾರು ಫಿಲಂ ಸ್ಟುಡಿಯೋಗಳಿಗೆ ಕೆಲಸ ಮಾಡಿದ್ದಾರೆ.

ಮುಸ್ಲಿಂ ಮಹಿಳೆಯರಿಂದ ರಾಮಜ್ಯೋತಿ: ಮುಸ್ಲಿಂ ಮಹಿಳೆಯರಾದ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವೀನ್ ಎಂಬವರು ಅಯೋಧ್ಯೆಯಿಂದ ತಮ್ಮೂರಾದ ವಾರಾಣಸಿಗೆ ಶ್ರೀರಾಮಜ್ಯೋತಿ ತರಲಿದ್ದಾರೆ. ಆ ಮೂಲಕ ಅವರು ಶ್ರೀರಾಮನ ಸಂದೇಶವನ್ನು ಊರಿನ ತಮ್ಮ ಸಮುದಾಯದವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಜ್ಯೋತಿ ತರುವ ಸಲುವಾಗಿ ಇವರು ಶನಿವಾರವೇ ಅಯೋಧ್ಯೆಗೆ ಹೊರಟಿದ್ದಾರೆ. ಕಾಶಿಯ ದೊಮ್ರಾಜ್ ಓಂ ಚೌಧರಿ ಮತ್ತು ಮಹಾಂತ ಪತಲಪುರಿ ಮಠದ ಬಾಲಕದಾಸ್ ಇವರ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ. ಮಹಾಂತ ಶಂಭು ದೇವಾಚಾರ್ಯ ಭಾನುವಾರ ಅಯೋಧ್ಯೆಯಲ್ಲಿ ಇವರಿಗೆ ರಾಮಜ್ಯೋತಿ ನೀಡಲಿದ್ದಾರೆ. ಜ್ಯೋತಿಯೊಂದಿಗೆ ಅಯೋಧ್ಯೆಯ ಪವಿತ್ರ ಮೃತ್ತಿಕೆ, ಸರಯೂ ನದಿಯ ಜಲವನ್ನೂ ತರಲಿದ್ದಾರೆ.

ನೇರ ಪ್ರಸಾರಕ್ಕೆ ವ್ಯವಸ್ಥೆ: ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೇಶಾದ್ಯಂತ ಬೂತ್​ವುಟ್ಟದಲ್ಲಿ ನೇರಪ್ರಸಾರ ಮಾಡಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ಪ್ರಾಣ ಪ್ರತಿಷ್ಠಾಪನೆಯನ್ನು ಬೂತ್​ವುಟ್ಟದಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರ ಮಾಡುವಂತೆ ಪಕ್ಷ ತಿಳಿಸಿದ್ದು, ಆ ಮೂಲಕ ಜನಸಾಮಾನ್ಯರಿಗೂ ಕಾರ್ಯಕ್ರಮದ ವೀಕ್ಷಣೆ ಸಾಧ್ಯವಾಗಿಸುವ ಗುರಿ ಹೊಂದಿದೆ. ಪ್ರಾಣ ಪ್ರತಿಷ್ಠಾಪನೆಯನ್ನು ಉತ್ತರಪ್ರದೇಶದ ಎಲ್ಲ ಜೈಲುಗಳಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಧರ್ಮವೀರ ಪ್ರಜಾಪತಿ ಹೇಳಿದ್ದಾರೆ.

ನನ್ನ ತಂದೆ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾಗಿದ್ದರು. ಅವರು ಹನುಮಂತನ ಬಗ್ಗೆ ಅಪಾರ ಭಕ್ತಿ ಹೊಂದಿದ್ದು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಸ್ಥಾಪನೆ ಆಗುವ ಕನಸು ಕಂಡಿದ್ದರು. ಆದರೆ ಈಗ ಅವರು ಇಲ್ಲದಿರುವುದರಿಂದ ನಾನು ತಂದೆಯ ಆಸೆಯಂತೆ ಈ ಕಾರ್ಯ ಕೈಗೊಂಡಿದ್ದೇನೆ.

| ಚಲ್ಲ ಶ್ರೀನಿವಾಸ ಶಾಸ್ತ್ರಿ