ನ್ಯೂಸ್

ಇತರರಿಗೋಸ್ಕರ ದೀಪ ಹಚ್ಚಿ | Light The Lamp

ಮೋಹನ್​ ಶೆಟ್ಟಿ

ಧರ್ಮ ಮತ್ತು ಧರ್ಮಾಚರಣೆ ಇಲ್ಲದವನ ಬಾಳು ಬ್ರೇಕ್ ಇಲ್ಲದ ವಾಹನದಂತೆ. ಲೌಕಿಕ ಜೀವನ ಬರಿ ಭೋಗಕ್ಕಾಗಿ. ಆದರೆ ಪಾರಮಾರ್ಥಿಕ ಜೀವನ ಭೋಗ ಮೋಕ್ಷಗಳಿಗಾಗಿ. ಲೌಕಿಕ ಜೀವನ ಕಹಿಯಾದರೆ ಪಾರಮಾರ್ಥಿಕ ಜೀವನ ಸಿಹಿ. ಇವುಗಳನ್ನು ಗುರು ಮುಖದಿಂದ ಅರಿತು ಆಚರಿಸಬೇಕು. ಧರ್ಮ ಸಂಸ್ಕೃತಿ ಪರಂಪರೆ ಮನುಷ್ಯನಿಗೆ ಬೇಕು. ಇವುಗಳಿಲ್ಲದ ವ್ಯಕ್ತಿಯ ಜೀವನ ನಿರರ್ಥಕವಾದುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ಯಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ವೀರಶೈವ ಪ್ರಾಚೀನ ಮತ್ತು ಇತಿಹಾಸ ಸಂಸಿದ್ಧವಾದುದು. ಶಿವಾಗಮಗಳಲ್ಲಿ ವೀರಶೈವ ಧರ್ಮದ ಬೇರುಗಳನ್ನು ಕಾಣಬಹುದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಜನ ಸಾಮಾನ್ಯರ ಮನಸ್ಸಿನ ಮೇಲೆ ಧರ್ಮದ ಬೆಳಕನ್ನು ಬೀರಿದ್ದಾರೆ (Light The Lamp). ಅಪಮೌಲ್ಯಗಳನ್ನು ದೂರ ತಳ್ಳಿ ಧರ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಶ್ರೀ ಗುರು ಅರಿವಿನ ಚೈತನ್ಯ ಮೂರ್ತಿ. ಸಕಲ ಜೀವರಾಶಿಗಳಿಗೆ ಒಳಿತನ್ನು ಬಯಸುವ ಕರುಣಾಸಾಗರ. ಗುರುವಿನ ಕಾರುಣ್ಯ ಕಿರಣದಿಂದ ಶಿಷ್ಯನ ಹೃದಯ ಕಮಲ ಅರಳಬೇಕು. ನಿಜವಾದ ಶಿಷ್ಯ ಗುರುವಿನ ವಸಂತಾಗಮನಕ್ಕಾಗಿ ಕಾಯುವ ಕೋಗಿಲೆಯಾಗಬೇಕು. ಗುರು ಶಿಷ್ಯರ ಸಂಬಂಧ ಅವರ್ಣನೀಯ. ಜನ್ಮ ಕೊಟ್ಟ ತಾಯಿ ತಂದೆ, ಒಡಹುಟ್ಟಿದ ಅಣ್ಣ ತಂಗಿ, ಕೈ ಹಿಡಿದ ಹೆಂಡತಿ ನಿಮಿತ್ತದಿಂದ ಪ್ರಾಪಂಚಿಕ ಎಲ್ಲ ಸಂಬಂಧಗಳು ಇರುತ್ತವೆ. ಆದರೆ ಗುರು ಶಿಷ್ಯರಲ್ಲಿ ಪ್ರಾಪಂಚಿಕ ಸಂಬಂಧ ಇಲ್ಲ.

ಆದ್ದರಿಂದ ಗುರು ಎಲ್ಲರಿಗೂ ಅನಿಮಿತ್ತ ಬಂಧು. ತಾಳ್ಮೆ, ಪ್ರಾಮಾಣಿಕತೆ, ಹಿರಿಯರ ಮಾರ್ಗದರ್ಶನ, ನಿರಂತರ ಪ್ರಯತ್ನ, ಶ್ರದ್ಧೆ ಮತ್ತು ಆತ್ಮ ವಿಶ್ವಾಸ ಯಶಸ್ಸಿಗೆ ಆವಶ್ಯಕ ಅಂಶಗಳು. ಸುಲಭದಲ್ಲಿ ಸಂಪಾದನೆಯಾದ ಹಣ ಮತ್ತು ದ್ರವ್ಯ ಹೆಚ್ಚು ದಿನ ಉಳಿಯುವುದಿಲ್ಲ. ಯಾವ ಸಂಬಂಧಗಳೂ ತಾವಾಗಿಯೇ ಹಾಳಾಗುವುದಿಲ್ಲ. ಅನುಮಾನ, ಅಹಂಕಾರ, ನಿರ್ಲಕ್ಷ್ಯದಿಂದ ಮಾನವ ಜೀವನ ಹಾಳಾಗುತ್ತದೆ. ಇತರರಿಗೋಸ್ಕರ ದೇವರಿಗೆ ದೀಪ ಹಚ್ಚಿದಾಗ ಅದರ ಬೆಳಕು ನಿಮ್ಮ ಜೀವನದ ಕತ್ತಲೆಯನ್ನು ಕಳೆಯುತ್ತದೆ.